ಉತ್ಪಾದಕರ ಹಿತದೃಷ್ಟಿಯಿಂದ ಕಾರ್ಮಿಕರ ಕಾನೂನುಗಳಿಗೆ ತಿದ್ದುಪಡಿ: ಡಿಸಿಎಂ ಡಾ.ಅಶ್ವಥ್ ನಾರಾಯಣ

Update: 2020-05-20 16:39 GMT

ಬೆಂಗಳೂರು, ಮೇ 20: 'ದೇಶದ ಉತ್ಪಾದಕ ವರ್ಗದವರೊಂದಿಗೆ ಹಾಗೂ ವಿಶ್ವದಲ್ಲಿ ಸ್ಪರ್ಧಾತ್ಮಕ ಸ್ತರದಲ್ಲಿರಲು ಮತ್ತು ಸಾಂಕ್ರಾಮಿಕ ರೋಗದ ಈ ಸಂಕಷ್ಟದ ಸಂದರ್ಭಕ್ಕೆ ಅನುಗುಣವಾಗಿ ತಮ್ಮ ಘಟಕಗಳನ್ನು ಮರುರೂಪಿಸಲು ಅನುಕೂಲವಾಗುವಂತೆ, ಉತ್ಪಾದಕರ ಹಿತದೃಷ್ಟಿಯಿಂದ ಕಾರ್ಮಿಕರ ಕಾನೂನುಗಳಿಗೆ ತಿದ್ದುಪಡಿ ತರಲಾಗಿದೆ' ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಸಮರ್ಥಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, `ಈ ಬದಲಾವಣೆಗಳನ್ನು ತರದಿದ್ದಲ್ಲಿ, ಉತ್ಪಾದಕರು ಸಂಕಷ್ಟಕ್ಕೆ ಸಿಲುಕಿ ಹಲವು ಕಂಪೆನಿಗಳು, ಕೈಗಾರಿಕಾ ಘಟಕಗಳು ಮುಚ್ಚುವ ಸಂಭವವಿದೆ. ರಾಜ್ಯದ ಪ್ರತಿಯೊಬ್ಬರ ಹಿತಾಸಕ್ತಿ ಮಾತ್ರವೇ ನಮ್ಮ ಗಮನದಲ್ಲಿರುವುದು' ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯ ಸರಕಾರದ ಎಪಿಎಂಸಿ ತಿದ್ದುಪಡಿ ಕಾಯ್ದೆ ಪ್ರಸ್ತುತ ಇರುವ ಸಮಸ್ಯೆಗಳನ್ನು ದೂರಗೊಳಿಸಿ ನಮ್ಮ ಅನ್ನದಾತರಿಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡುವಲ್ಲಿ ಅಧಿಕಾರ ನೀಡಿದೆ. ತಮ್ಮ ಬೆಳೆಗೆ ಅತ್ಯುತ್ತಮ ದರವನ್ನು ನೀಡುವುದು ಖರೀದಿದಾರರಿಗೆ ಮಾರಾಟ ಮಾಡುವ ಅವಕಾಶವಿದೆ' ಎಂದು ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡಿರುವುದು ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸರಿಯಾದ ನಿರ್ಧಾರವಾಗಿದೆ. ಇಡೀ ಆಡಳಿತಾತ್ಮಕ ವ್ಯವಸ್ಥೆಗೆ ಅಪಾಯ ತರುವಂತಹ ದುಸ್ಸಾಹಸಕ್ಕೆ ನಮ್ಮ ಸರಕಾರ ಕೈಹಾಕದು. ಆದುದರಿಂದ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ(1993)ಯಡಿ ಆಡಳಿತ ಮಂಡಳಿಗಳನ್ನು ರೂಪಿಸಲು ನಿರ್ಧರಿಸಲಾಗಿದೆ' ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News