×
Ad

ಸೋಮವಾರಪೇಟೆಯಲ್ಲಿ ಸಂಘ ಪರಿವಾರದಿಂದ ಕೋಮು ಗಲಭೆಗೆ ಷಡ್ಯಂತ್ರ: ಕಠಿಣ ಕ್ರಮಕ್ಕೆ ಪಿಎಫ್ ಐ ಆಗ್ರಹ

Update: 2020-05-21 15:27 IST

ಕೊಡಗು, ಮೇ 21: ಕ್ಷುಲ್ಲಕ ವಿಚಾರಕ್ಕೆ‌ ಸಂಬಂಧಿಸಿದಂತೆ ಯುವಕರಿಬ್ಬರ ಮಧ್ಯೆ ‌ನಡೆದ ಹೊಡೆದಾಟದ ಘಟನೆಗೆ ಕೋಮುಬಣ್ಣ ನೀಡಿ ಜಿಲ್ಲೆಯನ್ನು ಉದ್ವಿಗ್ನತೆಗೆ ತಳ್ಳಿದ ಸಂಘ ಪರಿವಾರದ ಷಡ್ಯಂತ್ರವನ್ನು ಪಾಪ್ಯುಲರ್ ಫ್ರಂಟ್ ಆಫ್‌ ಇಂ‌ಡಿಯಾ(ಪಿಎಫ್ ಐ)ದ ಕೊಡಗು ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್ ತೀವ್ರವಾಗಿ ಖಂಡಿಸಿದ್ದಾರೆ.

ಶನಿವಾರಸಂತೆಯ ಕೆ.ಆರ್.ಸಿ. ವೃತ್ತದ ನೆರೆಮನೆಯವರಾದ ಇರ್ಫಾನ್ ಮತ್ತು ದರ್ಶನ್ ಎಂಬವರ ನಡುವೆ ಕ್ಷುಲ್ಲಕ ‌ಕಾರಣಕ್ಕೆ ಹೊಡೆದಾಟ ನಡೆದಿತ್ತು. ಪರಸ್ಪರರ ‌ವಿರುದ್ಧ‌ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಆದರೆ ನಂತರ ಘಟನೆಗೆ ಕೋಮು ಬಣ್ಣ ನೀಡಿದ ಸಂಘ ಪರಿವಾರವು ಜಿಲ್ಲೆಯನ್ನು ಉದ್ವಿಗ್ನತೆಗೆ ತಳ್ಳಿತು. ಹಾಸನ ಜಿಲ್ಲೆಯ ಸಕಲೇಶಪುರದ ಬಜರಂಗ ದಳದ‌ ಮುಖಂಡ ರಘು ನೇತೃತ್ವದಲ್ಲಿ 30ಕ್ಕೂ ಹೆಚ್ಚು ಮಂದಿ ಲಾಕ್‌ಡೌನ್ ‌ವೇಳೆ ಜಿಲ್ಲೆಗೆ ಅಕ್ರಮವಾಗಿ ಪ್ರವೇಶಿಸಿ ಭಯದ‌‌ ವಾತಾವರಣವನ್ನು ಸೃಷ್ಟಿಸಿದ್ದರು. ಬಳಿಕ ಸಂಘ ಪರಿವಾರದ ನೂರಾರು ಮಂದಿ ಕಾರ್ಯಕರ್ತರು ಆಯುಧಗಳೊಂದಿಗೆ ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. ಈ ನಡುವೆ ವಾಹನವೊಂದಕ್ಕೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದು ಜಿಲ್ಲೆಯಲ್ಲಿ ಕೋಮು ಗಲಭೆ ಹರಡುವ ಹುನ್ನಾರದಿಂದಲೇ ನಡೆದ ಕೃತ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ರಘು ಸಕಲೇಶಪುರ ಮತ್ತು ಆತನ ಸಹಚರರ ವಿರುದ್ಧ ಎಸ್ಪಿ ಅವರಿಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಾಂತಿಯುತವಾಗಿರುವ ಕೊಡಗಿನಲ್ಲಿ ಅಶಾಂತಿ ಸೃಷ್ಟಿಸಲೆಂದು ಹೊರ‌ ಜಿಲ್ಲೆಯಿಂದ ಅಕ್ರಮವಾಗಿ ಪ್ರವೇಶಿಸಿರುವವರ ಮೇಲೆ‌ ಪೊಲೀಸರು ನಿಗಾ ವಹಿಸಬೇಕು. ಲಾಕ್‌ಡೌನ್ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಜಿಲ್ಲೆಗೆ ಅಕ್ರಮ ಪ್ರವೇಶಗೈದ, ಪೊಲೀಸ್ ಠಾಣೆಯಲ್ಲಿ ಪುಂಡಾಟಿಕೆ ಮೆರೆದ ಮತ್ತು ವಾಹನಕ್ಕೆ ಬೆಂಕಿ ಹಚ್ಚಿ ಈದ್ ಉಲ್ ಫಿತ್ರ್ ಹಬ್ಬದ ಸಂದರ್ಭದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಸಂಘಪರಿವಾರದ ಕಾರ್ಯಕರ್ತರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಮೀನ್ ಮುಹ್ಸಿನ್ ಪ್ರಕಟನೆಯ ಮೂಲಕ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News