ಪಿಎಂ ಕೇರ್ಸ್ ಫಂಡ್ ಬಗ್ಗೆ ಟ್ವೀಟ್: ಶಿವಮೊಗ್ಗದಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್‍ಐಆರ್

Update: 2020-05-21 11:18 GMT

ಬೆಂಗಳೂರು: ‘ಪಿಎಂ ಕೇರ್ಸ್’ ಫಂಡ್ ಕುರಿತಂತೆ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ `ಜನರನ್ನು ತಪ್ಪು ದಾರಿಗೆಳೆಯಲಾಗಿದೆ' ಹಾಗೂ `ವದಂತಿಗಳನ್ನು ಹರಡಲಾಗಿದೆ' ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಕೀಲರಾದ ಕೆ ವಿ ಪ್ರವೀಣ್ ಎಂಬವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ್ದು, ಅವರ ವಿರುದ್ಧ ಸಾಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಕಾಂಗ್ರೆಸ್ ಪಕ್ಷ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ಮೇ 11ರಂದು ಸಂಜೆ 6 ಗಂಟೆಯ ನಂತರ ಮಾಡಿದ ಸರಣಿ ಟ್ವೀಟ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸರಕಾರದ ವಿರುದ್ಧ ‘ಆಧಾರರಹಿತ’ ಹಾಗೂ `ಸುಳ್ಳು' ಆರೋಪಗಳನ್ನು ಮಾಡಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

“ಕೋವಿಡ್-19 ವಿರುದ್ಧ ಹೋರಾಡಲು ರಚಿಸಲಾದ ಪಿಎಂ ಕೇರ್ಸ್ ಫಂಡ್ ಹಣವನ್ನು ನಾಗರಿಕರ ಕಲ್ಯಾಣಕ್ಕಾಗಿ ಬಳಸದೆ ಅವರ ವಿದೇಶ ಪ್ರವಾಸಗಳಿಗಾಗಿ ಹಾಗೂ ಇತರ ಖಾಸಗಿ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಟ್ವೀಟ್‍ಗಳು ಹೇಳಿವೆ'' ಎಂದು ದೂರುದಾರ ಪ್ರವೀಣ್ ಆರೋಪಿಸಿದ್ದಾರೆ. ಇಡೀ ದೇಶವು ಸರಕಾರ ಮತ್ತು ಪ್ರಧಾನಿಯ ಬೆಂಬಲಕ್ಕೆ ನಿಲ್ಲಬೇಕಾದಂತಹ ಇಂದಿನ ಸಂದರ್ಭದಲ್ಲಿ  ಜನರಲ್ಲಿ ತಪ್ಪು ಅಭಿಪ್ರಾಯ ಮೂಡುವಂತಹ ಸಂದೇಶಗಳನ್ನು ಹರಡಬಾರದು, ಎಂದು ಹೇಳಿದ್ದಾರೆ.

ಎಫ್‍ಐಆರ್ ದಾಖಲಾಗಿರುವುದನ್ನು ದೃಢೀಕರಿಸಿದ ಸಾಗರ ಪಟ್ಟಣ ಪೊಲೀಸ್ ಠಾಣಾಧಿಕಾರಿ, “ದೂರಿನಲ್ಲಿ ತಿಳಿಸಿದಂತೆ ಐಎನ್‍ಸಿ ಇಂಡಿಯಾ ಟ್ವಿಟ್ಟರ್ ಖಾತೆಯನ್ನು ನಿಭಾಯಿಸುವವರು ಎಂದು ಸೋನಿಯಾ ಗಾಂಧಿಯವರನ್ನು ಗುರುತಿಸಿ ಅವರ ವಿರುದ್ಧ ಸೆಕ್ಷನ್ 153 ಹಾಗೂ ಸೆಕ್ಷನ್ 505(1)ಬಿ  ಅನ್ವಯ ಪ್ರಕರಣ ದಾಖಲಿಸಲಾಗಿದೆ, ತನಿಖೆ ಮುಂದುವರಿದಿದೆ'' ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News