ಬಳ್ಳಾರಿಯಲ್ಲಿ ಗರ್ಭಿಣಿ ಸೇರಿ 11 ಜನರಿಗೆ ಕೊರೋನ ಸೋಂಕು ದೃಢ

Update: 2020-05-21 12:56 GMT

ಬಳ್ಳಾರಿ, ಮೇ 21: ಮುಂಬೈನಿಂದ ಗುಂಟಕಲ್ ಮೂಲಕ ಬಳ್ಳಾರಿಗೆ ಬಂದಿದ್ದ 11 ಜನರಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಮೀನುಗಾರಿಕೆ ಕೆಲಸ ಮಾಡುತ್ತಿದ್ದ 7 ಮಹಿಳೆಯರು, 3 ಪುರುಷರು ಮತ್ತು ಒಬ್ಬರು ಮಂಗಳಮುಖಿಗೆ ಸೋಂಕು ಇರುವುದು ಪತ್ತೆಯಾಗಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದ್ದಾರೆ.

ಗುರುವಾರ ಬಳ್ಳಾರಿ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೇ 6ರಂದು ಮಹಾರಾಷ್ಟ್ರದಿಂದ 65 ಜನರು ಗುಂಟಕಲ್‍ಗೆ ಬಂದಿದ್ದರು. ಅಲ್ಲಿಯ ಅಧಿಕಾರಿ ನಮನ್ನು ಸಂಪರ್ಕಿಸಿ ಅಲ್ಲಿಂದ ಅವರೆಲ್ಲರನ್ನೂ ಬಸ್ ಮೂಲಕ ಬಳ್ಳಾರಿಗೆ ಕಳುಹಿಸಿದ್ದರು. ಸದ್ಯ ಅವರನ್ನು ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.

ಸೋಂಕು ದೃಢಪಟ್ಟಿರುವವರ ಪೈಕಿ ಒಬ್ಬ ಮಹಿಳೆಗೆ ನವಜಾತ ಶಿಶುವಿದೆ. ಮತ್ತೊಬ್ಬರು ಗರ್ಭಿಣಿಯೂ ಇದರಲ್ಲಿ ಸೇರಿದ್ದಾರೆ. ಇವರನ್ನು 4 ಹಾಸ್ಟೆಲ್‍ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಉಳಿದವರನ್ನು 14 ಹಾಸ್ಟೆಲ್‍ಗಳಲ್ಲಿ ಇರಿಸಲಾಗಿದೆ ಎಂದು ಹೇಳಿದರು.

ಮುಂಬೈನಿಂದ ಬಂದ 187 ಜನರ ಪೈಕಿ 21 ಜನರು ಕೊರೋನ ದೃಢಪಟ್ಟಿರುವವರ ಸಂಪರ್ಕದಲ್ಲಿದ್ದರೆ, ಉಳಿದ 49  ಜನರು ಪ್ರಾಥಮಿಕ ಸಂಪರ್ಕದಲ್ಲಿದ್ದರು. ಸದ್ಯ ಬಂದವರನ್ನು ನೇರವಾಗಿ ಕ್ವಾರಂಟೈನ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಂಟೈನ್‍ಮೆಂಟ್ ಝೋನ್ ಮಾಡುವ ಅಗತ್ಯವಿಲ್ಲ. ಹೊರಗಡೆಯಿಂದ ಬಂದ ಯಾರನ್ನೂ ಅವರವರ ಹಳ್ಳಿಗಳಿಗೆ ಕಳುಹಿಸಲಾಗುತ್ತಿಲ್ಲ. ಕ್ವಾರಂಟೈನ್ ಮಾಡಿ ಅವರನ್ನು ಸ್ಕ್ರೀನಿಂಗ್ ಟೆಸ್ಟ್ ಮಾಡಿದ ನಂತರವೇ ಕಳುಹಿಸಿ ಕೊಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಕುಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News