ಮದುವೆ ಸಮಾರಂಭಗಳಿಗೆ ರವಿವಾರದ ನಿಷೇಧಾಜ್ಞೆಯಿಂದ ವಿನಾಯಿತಿ ನೀಡಿದ ರಾಜ್ಯ ಸರಕಾರ

Update: 2020-05-21 14:23 GMT

ಬೆಂಗಳೂರು, ಮೇ 21: ಕೊರೋನ ವೈರಸ್ ಸೋಂಕು ತಡೆಗಟ್ಟಲು ಹೇರಿರುವ ಲಾಕ್‍ಡೌನ್ ಮೇ 31ರ ವರೆಗೆ ಮುಂದುವರಿಯಲಿದ್ದು, ರವಿವಾರ ಸಂಪೂರ್ಣ ಲಾಕ್‍ಡೌನ್ ಇರಲಿದೆ. ಆದರೆ, ಸುರಕ್ಷಿತ ಅಂತರ ಕಾಯ್ದುಕೊಂಡು, ಗರಿಷ್ಠ 50 ಮಂದಿ ಅತಿಥಿಗಳ ಸಂಖ್ಯೆಯನ್ನು ಸೀಮಿತಗೊಳಿಸಿ ಸರಳ ಮದುವೆ ಸಮಾರಂಭಕ್ಕೆ ಅನುಮತಿ ನೀಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

'ರವಿವಾರ' ಈಗಾಗಲೇ ನಿಗದಿಪಡಿಸಿರುವ ಮದುವೆ ಸಮಾರಂಭಗಳಿದ್ದರೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಸುರಕ್ಷಿತ ಅಂತರವನ್ನು ಖಾತರಿಪಡಿಸಿಕೊಂಡು ಕಟ್ಟುನಿಟ್ಟಾಗಿ ಅನುಸರಿಸಿ, ಸಮಾರಂಭ ನಡೆಸಲು ಅನುಮತಿಸಲಾಗಿದೆ ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ರವಿವಾರ ಅವಶ್ಯಕ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಗುರುವಾರ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮೇ 31ರ ವರೆಗೆ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯ ವರೆಗೆ ಕೇಂದ್ರದ ಮಾರ್ಗಸೂಚಿ ಅನ್ವಯ ಎಲ್ಲ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ರವಿವಾರದಂದು ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಅವಶ್ಯಕವಲ್ಲದ ಎಲ್ಲ ಚಟುವಟಿಕೆಗಳು ಮತ್ತು ವ್ಯಕ್ತಿಗಳ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಈ ಸಂಬಂಧ ಸ್ಥಳೀಯ ಪ್ರಾಧಿಕಾರಿಗಳಿಂದ ಆದೇಶಗಳನ್ನು ಹೊರಡಿಸಬೇಕು ಎಂದು ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News