ಈದುಲ್ ಫಿತ್ರ್ ಆಚರಣೆ: ರಾಜ್ಯದ ಮುಸ್ಲಿಂ ಮುಖಂಡರಿಂದ ಮಾರ್ಗಸೂಚಿ ಪ್ರಕಟ

Update: 2020-05-21 14:28 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 21: ಕೋವಿಡ್-19 ಲಾಕ್‍ಡೌನ್ ಸಂದರ್ಭದಲ್ಲಿ ಈದುಲ್ ಫಿತ್ರ್ ಅನ್ನು ಆರೋಗ್ಯಕ್ಕೆ ಸಂಬಂಧಿಸಿದ ಮುನ್ನೆಚ್ಚರಿಕಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಆಚರಣೆ ಮಾಡುವ ಕುರಿತು ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದ ಇಮಾರತ್-ಎ-ಶರೀಅ ರಾಜ್ಯದ ಮುಸ್ಲಿಮರಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಈದುಲ್ ಫಿತ್ರ್ ಅನ್ನು ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಬೇಕು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ಬಡವರು ಹಾಗೂ ಸಂಬಂಧಿಕರಲ್ಲಿ ನೆರವಿನ ಅಗತ್ಯವಿರುವವರತ್ತ ಸಹಾಯ ಹಸ್ತ ಚಾಚಬೇಕು. ಅವರನ್ನು ನಮ್ರತೆ, ಸಹಾನುಭೂತಿ ಹಾಗೂ ಸಮಾನತೆಯಿಂದ ಕಾಣಬೇಕು.

ಈ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಈದ್ಗಾದಲ್ಲಿ ಈದ್ ನಮಾಝ್ ನಿರ್ವಹಿಸಲು ಸಾಧ್ಯವಿಲ್ಲ. ಮಸೀದಿಗಳಲ್ಲಿ ಮುಂಜಾನೆಯೇ ಐದು ಮಂದಿಗಿಂತ ಹೆಚ್ಚಿನ ಜನ ಮೀರದಂತೆ ಈದ್ ನಮಾಝ್ ನಿರ್ವಹಿಸಬಹುದಾಗಿದೆ. ಉಳಿದವರು ತಮ್ಮ ಮನೆಗಳಲ್ಲಿಯೆ ಇಸ್ಲಾಮಿಕ್ ನಿಯಮಗಳು ಹಾಗೂ ಸರಕಾರದ ನಿದೇರ್ಶನಗಳನ್ನು ಗಮನದಲ್ಲಿಟ್ಟುಕೊಂಡು ನಮಾಝ್ ನಿರ್ವಹಿಸಬೇಕು.

ಈದ್ ಸಂದರ್ಭದಲ್ಲಿ ಶುಭಾಶಯ ವಿನಿಮಯ ಮಾಡುವಾಗ ಕೈ ಕುಲುಕುವುದಾಗಲಿ, ಆಲಿಂಗನ ಮಾಡುವುದನ್ನು ನಿರ್ಬಂಧಿಸಬೇಕು. ಮನೆಯಿಂದ ಅನಗತ್ಯವಾಗಿ ಹೊರಗೆ ಹೋಗಬೇಡಿ. ಅಲ್ಲದೆ, ಸ್ನೇಹಿತರು, ಸಂಬಂಧಿಕರನ್ನು ಭೇಟಿ ಮಾಡಲು ತೆರಳುವುದನ್ನು ಮುಂದೂಡಿ. ಈದ್ ಹಿನ್ನೆಲೆಯಲ್ಲಿ ಹೊರಗೆ ಪ್ರಯಾಣಿಸುವುದು ಹಾನಿಕಾರಕವಾಗಬಹುದು. ಈದ್‍ಗೂ ಮುನ್ನ ಪ್ರತಿಯೊಬ್ಬರೂ ಫಿತ್ರ್ ಝಕಾತ್ ನೀಡಿ, ಈದ್ ದಿನ ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚಿನ ದುಆ ಮಾಡಿ ಎಂದು ಮನವಿ ಮಾಡಲಾಗಿದೆ.

ಈದ್ ನಂತರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ಕೋರಿ ಸರ್ವ ಧರ್ಮಗಳ ಮುಖಂಡರೊಂದಿಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅಮೀರೆ ಶರೀಅತ್ ಮಾರ್ಗಸೂಚಿಗಳಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News