ಸಂಘರ್ಷಕ್ಕೆ ಅವಕಾಶ ನೀಡದೆ ಸೋನಿಯಾ ಗಾಂಧಿ ವಿರುದ್ಧದ ಎಫ್‍ಐಆರ್ ರದ್ದುಪಡಿಸಿ: ಸಿದ್ದರಾಮಯ್ಯ ಒತ್ತಾಯ

Update: 2020-05-21 14:32 GMT

ಬೆಂಗಳೂರು, ಮೇ 21: 'ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿರುದ್ಧ ದುರುದ್ದೇಶದಿಂದ ಎಫ್‍ಐಆರ್ ದಾಖಲಿಸಿದ ಸಾಗರ ಪೊಲೀಸ್ ಅಧಿಕಾರಿ ಹದ್ದುಮೀರಿ ವರ್ತಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರೇ ಅನಗತ್ಯ ಸಂಘರ್ಷಕ್ಕೆ ಅವಕಾಶ ನೀಡದೆ ತಕ್ಷಣ ಈ ಎಫ್‍ಐಆರ್ ರದ್ದುಪಡಿಸಿ ಮತ್ತು ಅಧಿಕಾರಿಯನ್ನು ಅಮಾನತ್ತಿನಲ್ಲಿರಿಸಿ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, 'ದೇಶದ ಜನರ ದೇಣಿಗೆಯ ಪಿಎಂ ಕೇರ್ ಫಂಡ್ ಯಾರೊಬ್ಬರ ಮನೆಯ ಆಸ್ತಿ ಅಲ್ಲ. ಅದು ಈ ದೇಶದ ಪ್ರಜೆಗಳ ದುಡ್ಡು, ಅದು ಸದುಪಯೋಗವಾಗಬೇಕು ಎಂದು ಹೇಳುವ ಅಧಿಕಾರ ಪ್ರತಿಯೊಬ್ಬರಿಗೆ ಇದೆ. ಅದನ್ನೇ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿಯವರು ಹೇಳಿದ್ದಾರೆ ತಪ್ಪೇನಿದೇ?' ಎಂದು ಪ್ರಶ್ನಿಸಿದ್ದಾರೆ.

'ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಅಲ್ಲಲ್ಲಿ ಪೊಲೀಸರು ಮೊಕದ್ದಮೆ ದಾಖಲಿಸುತ್ತಿರುವುದು ನಡೆದಿದೆ. ಈ ರೀತಿ ನಮ್ಮ ಬಾಯಿ ಮುಚ್ಚಿಸಬಹುದು ಎಂದು ತಿಳಿದುಕೊಂಡಿದ್ದರೆ ಅದು ಮೂರ್ಖತನ. ಮುಂದಿನ ದಿನಗಳಲ್ಲಿ ನಮ್ಮ ಪ್ರಶ್ನೆಗಳು ಇನ್ನಷ್ಟು ಹರಿತವಾಗಲಿದೆ. ಸಂಘರ್ಷ ಇನ್ನಷ್ಟು ಬಿರುಸು ಪಡೆಯಲಿದೆ' ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಸಮಯ ಮತ್ತು ಶ್ರಮವನ್ನು ಕೋವಿಡ್-19 ಸೋಂಕನ್ನು ಎದುರಿಸಲು ಮತ್ತು ನೊಂದವರಿಗೆ ನೆರವಾಗಲು ವ್ಯಯ ಮಾಡಲಿ. ಈ ಕಷ್ಟದ ದಿನಗಳ ಅವಕಾಶವನ್ನು ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರನ್ನು, ಕಾರ್ಯಕರ್ತರನ್ನು ಹಣಿಯಲು ದುರುಪಯೋಗ ಮಾಡಿಕೊಳ್ಳಬೇಡಿ' ಎಂದು ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ವಿರೋಧ ಪಕ್ಷದ ನಾಯಕಿಯಾಗಿ ಜನಾಭಿಪ್ರಾಯವನ್ನು ಸರಕಾರದ ಮುಂದಿಟ್ಟಿದ್ದಾರೆ. ಇದಕ್ಕೆ ಸ್ಪಂದಿಸುವುದು ಜವಾಬ್ದಾರಿಯುತ ಸರಕಾರದ ಕರ್ತವ್ಯ' ಎಂದು ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.

ರಾಜಕೀಯ ಹೋರಾಟ ಅನಿವಾರ್ಯವಾಗಬಹುದು

ಸೋನಿಯಾ ಗಾಂಧಿಯವರ ವಿರುದ್ಧ ದೂರು ನೀಡಿದವನು ಬಿಜೆಪಿ ಕಾರ್ಯಕರ್ತನಾಗಿದ್ದು, ರಾಜಕೀಯ ದುರುದ್ದೇಶದಿಂದಲೇ ಇದನ್ನು ಮಾಡಲಾಗಿದೆ ಎಂಬ ಬಗ್ಗೆ ಅನುಮಾನ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸದಿದ್ದಲ್ಲಿ ರಾಜಕೀಯ ಹೋರಾಟ ಅನಿವಾರ್ಯವಾಗಬಹುದು'

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News