ಮಂಡ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣ: ಸೋಂಕಿತರ ಸಂಖ್ಯೆ 199ಕ್ಕೆ ಏರಿಕೆ, 25 ಮಂದಿ ಗುಣಮುಖ

Update: 2020-05-21 17:03 GMT
ಸಾಂದರ್ಭಿಕ ಚಿತ್ರ

ಮಂಡ್ಯ, ಮೇ 21: ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಗುರುವಾರ 33 ಮಂದಿಯ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಇವರೆಲ್ಲರೂ ಹೊರ ರಾಜ್ಯದಿಂದ ಬಂದವರಾದ್ದರಿಂದ ಜಿಲ್ಲೆಯ ಜನತೆ ಆತಂಕಪಡುವ ಅಗತ್ಯ ಇಲ್ಲವೆಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದ್ದಾರೆ.

ಗುರುವಾರದ 33 ಪಾಸಿಟಿವ್ ಪ್ರಕರಣ ಒಳಗೊಂಡಂತೆ ಜಿಲ್ಲೆಯಲ್ಲಿ ಕೊರೋನ ಸೋಂಕು ಪೀಡಿತರ ಸಂಖ್ಯೆ 199ಕ್ಕೆ ಏರಿದೆ. ಇವರಲ್ಲಿ 25 ಮಂದಿ ಗುಣಮುಖರಾಗಿದ್ದು, ಮಿಮ್ಸ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ 176 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 3,233 ನೆಗೆಟಿವ್ ವರದಿ ಬಂದಿದ್ದು, ಇನ್ನೂ 1,630 ಮಂದಿಯ ವರದಿ ಬರಬೇಕಾಗಿದೆ.

ನಾಗಮಂಗಲ, ಮಳವಳ್ಳಿ, ಪಾಂಡವಪರು ತಾಲೂಕುಗಳಲ್ಲಿ ತಲಾ ಒಬ್ಬರಿಗೆ ಕೋವಿಡ್ ಪತ್ತೆಯಾಗಿದ್ದು, ಉಳಿದವರು ಕೆ.ಆರ್.ಪೇಟೆ ತಾಲೂಕಿನವರಾಗಿದ್ದಾರೆ. ಬಹುತೇಕರು ಮುಂಬೈನಿಂದ ಬಂದವರಾಗಿದ್ದರೆ, ಕೆಲವರಿಗೆ ಸೋಂಕು ಪೀಡಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದವರು ಎಂದು ಡಿಸಿ ತಿಳಿಸಿದ್ದಾರೆ.

ಹೊರ ರಾಜ್ಯದಿಂದ ಬರುತ್ತಿರುವವರನ್ನು ಕೊರೈಂಟೈನ್ ಮಾಡಿ ಅವರ ಗಂಟಲ ದ್ರವ ಪರೀಕ್ಷೆ ನಡೆಸಲಾಗುತ್ತಿದೆ. ಪಾಸಿಟಿವ್ ಬಂದವರ ಸಂಪರ್ಕದಲ್ಲಿದ್ದವರನ್ನು ಕ್ವಾರೈಂಟೈನ್ ಮಾಡಲಾಗುತ್ತಿದೆ. ಆದ್ದರಿಂದ ಜನತೆ ಆತಂಕಪಡುವ ಅಗತ್ಯ ಇಲ್ಲವೆಂದು ಡಿಸಿ ಡಾ.ವೆಂಕಟೇಶ್ ಮನವಿ ಮಾಡಿದ್ದಾರೆ.

ಮಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ 350 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘದ ಭವನದಲ್ಲಿ 150 ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯವಿದ್ದರೆ ಇತರ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲು ಕ್ರಮವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ದಿಲ್ಲಿಯ ತಬ್ಲೀಗ್ ಸಭೆ, ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ಹಾಗೂ ಮುಂಬೈನಿಂದ ಬಂದವರಲ್ಲಿ ಮತ್ತು ಅವರ ಸಂಪರ್ಕದಲ್ಲಿದ್ದವರಲ್ಲಿ ಮಾತ್ರ ಕೊರೋನ ಸೋಂಕು ಕಾಣಿಸಿಕೊ0ಂಡಿದ್ದು, ಇತರರಿಗೆ ಹರಡಿಲ್ಲ. ಹೊರ ರಾಜ್ಯ, ಜಿಲ್ಲೆಯಿಂದ ಯಾರಾದರೂ ತಮ್ಮ ಗ್ರಾಮಗಳಿಗೆ ಬಂದಿದ್ದರೆ ತಹಶೀಲ್ದಾರ್ ಕಚೇರಿ, ಪೊಲೀಸರಿಗೆ ತಿಳಿಸಬೇಕು. ಸಾರ್ವಜನಿಕರು ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News