ಭಾರತದಲ್ಲಿ ಟಿಕ್‍ಟಾಕ್ ನಿಷೇಧಿಸಲು ಸೆಲೆಬ್ರಿಟಿಗಳ ಒತ್ತಾಯ: ಟ್ವಿಟರ್ ನಲ್ಲಿ ಅಭಿಯಾನ

Update: 2020-05-21 17:18 GMT

ಬೆಂಗಳೂರು, ಮೇ 21: ಇತ್ತೀಚೆಗೆ ಸಖತ್ ಸದ್ದು ಮಾಡುತ್ತಿರುವ ಟಿಕ್‍ಟಾಕ್ ಆ್ಯಪ್ ಅನ್ನು ಇಂಡಿಯಾದಲ್ಲಿ ಬ್ಯಾನ್ ಮಾಡಬೇಕು ಎಂದು ಕೆಲವು ಸೆಲಬ್ರಿಟಿಗಳು ಒತ್ತಾಯ ಮಾಡುತ್ತಿದ್ದು, ಟ್ವಿಟರ್ ನಲ್ಲಿ ಅಭಿಯಾನವನ್ನು ಆರಂಭಿಸಿದ್ದಾರೆ.

ನಮ್ಮ ಯುವ ಪೀಳಿಗೆ ಇತ್ತೀಚೆಗೆ ಜಾಸ್ತಿ ಬಳಕೆ ಮಾಡುತ್ತಿರುವ ಸಾಮಾಜಿಕ ಜಾಲತಾಣದಲ್ಲಿ ಟಿಕ್‍ಟಾಕ್ ಕೂಡ ಒಂದು. ಇಲ್ಲಿ ವಿಡಿಯೋವನ್ನು ಮಾಡಲು ಹೋಗಿ ಜನರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಟಿಕ್‍ಟಾಕ್ ಚೀನಾದ ಆ್ಯಪ್ ಆಗಿದ್ದು, ಸ್ವದೇಶಿ ವಸ್ತುಗಳನ್ನು ಬಳಸಿ ಹಾಗೂ ಚೀನಾದ ವಸ್ತುಗಳನ್ನು ತಿರಸ್ಕರಿಸಬೇಕು ಎಂಬ ನಿಟ್ಟಿನಲ್ಲಿ ಆ್ಯಪ್ ಅನ್ನು ವಿರೋಧ ಮಾಡುತ್ತಿದ್ದಾರೆ.

ಇನ್ನೂ ಕೆಲವರು ಇದರಲ್ಲಿ ವಿಡಿಯೋ ಮಾಡಿ ಜನಪ್ರಿಯತೆ ಪಡೆಯುವ ಗೀಳಿಗೆ ಬಿದ್ದ ಯುವಕ-ಯುವತಿಯರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂದು ವಾದಿಸುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಟಿಕ್‍ಟಾಕ್ ಬ್ಯಾನ್ ಆಗಬೇಕು ಎಂದು ಅಭಿಯಾನವನ್ನು ಆರಂಭಿಸಿದ್ದಾರೆ.

ಈ ಆ್ಯಪ್‍ನಲ್ಲಿ ಕೆಲ ಸೆಲೆಬ್ರಿಟಿಗಳು ವಿಡಿಯೋ ಮಾಡುತ್ತಿದ್ದರೆ, ಈ ಕಡೆ ಕೆಲ ಸೆಲೆಬ್ರಿಟಿಗಳು ಅದನ್ನು ಬ್ಯಾನ್ ಮಾಡುವಂತೆ ಟ್ವೀಟ್ ಮಾಡುತ್ತಿದ್ದಾರೆ. ಈಗ ಸ್ಯಾಂಡಲ್‍ವುಡ್‍ನ ಸ್ಟಾರ್ ನಿರ್ದೇಶಕರಾದ ಸಂತೋಷ್ ಆನಂದರಾಮ್, ಪವನ್‍ ಒಡೆಯರ್ ಮತ್ತು ಎಪಿ ಅರ್ಜುನ್ ಟಿಕ್‍ಟಾಕ್‍ಅನ್ನು ಬ್ಯಾನ್ ಮಾಡಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕೆಲ ಬಾಲಿವುಡ್ ನಟರು ಕೂಡ ಕೈಜೋಡಿಸಿದ್ದು, ಅದನ್ನು ಬ್ಯಾನ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.

ಯುವಜನತೆಯನ್ನು ಟಿಕ್‍ಟಾಕ್ ತಪ್ಪುದಾರಿಗೆ ಎಳೆಯುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅಭಿಪ್ರಾಯಪಟ್ಟಿದ್ದು, ಟಿಕ್‍ಟಾಕ್‍ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಪತ್ರವನ್ನು ಬರೆದಿದ್ದರು. ಮನರಂಜನೆಗಾಗಿ ಆರಂಭವಾದ ಟಿಕ್‍ಟಾಕ್ ಇಂದು ಹಿಂಸೆಯನ್ನು ಪ್ರೇರೇಪಿಸುತ್ತಿದೆ. ಮಹಿಳೆಯ ಮೇಲಿನ ಅತ್ಯಾಚಾರ, ಆಸಿಡ್ ದಾಳಿಗೆ ಪ್ರೇರಣೆ ನೀಡುವ ವಿಡಿಯೋಗಳು ಟಿಕ್‍ಟಾಕ್‍ನಲ್ಲಿ ಹೆಚ್ಚಾಗುತ್ತಿದೆ ಎಂದು ಬಿಜೆಪಿ ನಾಯಕ ತಾಜೀಂದರ್ ಸಿಂಗ್ ಮಾಡಿರುವ ಟ್ವೀಟ್‍ಗೆ ರೇಖಾ ಶರ್ಮಾ ಪ್ರತಿಕ್ರಿಯೆ ನೀಡಿದ್ದರು.

ಆಸಿಡ್ ದಾಳಿಗೆ ಪ್ರೇರಣೆ ನೀಡುವ ರೀತಿ ಟಿಕ್‍ಟಾಕ್ ವಿಡಿಯೋ ಮಾಡಿ ಹರಿಬಿಡಲಾಗಿದೆ. ಇತ್ತೀಚೆಗೆ ಟಿಕ್‍ಟಾಕ್‍ನಲ್ಲಿ 1.34 ಕೋಟಿ ಹಿಂಬಾಲಕರನ್ನು ಹೊಂದಿದ್ದ ಫೈಜಲ್ ಸಿದ್ದಿಕಿ ಇಂತಹ ವಿಡಿಯೋ ಮಾಡಿದ್ದ. ಇಂತಹ ವಿಡಿಯೋಗಳು ಸಮಾಜದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ವಿಡಿಯೋ ಮಾಡಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳಲು ಮಹಾರಾಷ್ಟ್ರ ಡಿಜಿಪಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ರೇಖಾ ಶರ್ಮಾ ಮಾಹಿತಿ ನೀಡಿದ್ದರು.

ಹಿಂಸೆಗೆ ಪ್ರಚೋದಿಸುವ ವಿಡಿಯೋಗಳನ್ನು ಕೂಡಲೇ ತೆಗೆದು ಹಾಕುವಂತೆ ಆಗ್ರಹಿಸಿರುವ ಅವರು, ಇಂತಹ ಆಕ್ಷೇಪಾರ್ಹ ವಿಡಿಯೋಗಳು ಮಾತ್ರವಲ್ಲದೇ ಮಾತ್ರವಲ್ಲದೇ ಟಿಕ್‍ಟಾಕ್ ಯುವಜನತೆಯನ್ನು ಅನುತ್ಪಾದಕ ಜೀವನ ಹಾಗೂ ಕೆಲ ಹಿಂಬಾಲಕರನ್ನು ಪಡೆಯವತ್ತ ತಳ್ಳುತ್ತಿದೆ. ಅನುಯಾಯಿಗಳು ಸಿಕ್ಕದಿದ್ದಾಗ ಕೆಲವರು ಸಾವಿಗೂ ಶರಣಾಗುತ್ತಿದ್ದಾರೆ ಎಂದು ರೇಖಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News