ಆನ್‍ಲೈನ್ ಬೋಧನೆ ಮೂಲಕ ಪರೀಕ್ಷೆ ನಿರ್ಧಾರ ಸರಕಾರದ ಆತುರದ ಕ್ರಮ: ಕುಮಾರಸ್ವಾಮಿ

Update: 2020-05-22 12:16 GMT

ಬೆಂಗಳೂರು, ಮೇ 22: 'ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ಮೂಲಕ ಮೇ 30ರೊಳಗೆ ಎಲ್ಲ ವಿಷಯವನ್ನು ಬೋಧಿಸಿ ಪರೀಕ್ಷೆ ನಡೆಸಲು ಮುಂದಾಗಿರುವ ಸರಕಾರದ ನಿರ್ಧಾರ ಆತುರದ ಕ್ರಮ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ಮುಂದಿನ ತಿಂಗಳು ಪರೀಕ್ಷಾ ವೇಳಾಪಟ್ಟಿಯನ್ನು ಘೋಷಿಸುವುದಾಗಿ ಸರಕಾರ ನಿರ್ಧರಿಸಿರುವುದು ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ' ಎಂದು ಎಚ್ಚರಿಸಿದ್ದಾರೆ.

ರಾಜ್ಯ ಸರಕಾರ ಈ ಬಗ್ಗೆ ಮರು ಚಿಂತನೆ ನಡೆಸುವ ತುರ್ತು ಅಗತ್ಯವಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆಟ್‍ವರ್ಕ್ ಸಮಸ್ಯೆಯಿಂದ ಆನ್‍ಲೈನ್ ತರಗತಿ ಪಠ್ಯ ಆಲಿಸುವುದು ಕಷ್ಟ. ಪ್ರತೀ ವಿದ್ಯಾರ್ಥಿಯೂ ಆನ್‍ಲೈನ್ ಮುಖಾಂತರ ಪರಿಪೂರ್ಣವಾಗಿ ಕಲಿಯಲು ಸಾಧ್ಯವಿಲ್ಲ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬಹುತೇಕ ವಿಶ್ವವಿದ್ಯಾಲಯ ಹಾಗೂ ಪದವಿ ಕಾಲೇಜುಗಳು ಆನ್‍ಲೈನ್ ತರಗತಿ ಆರಂಭಿಸಿವೆ. ಇದರಿಂದ ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೊರೋನ ಸಂಕಷ್ಟದ ಸಮಯದಲ್ಲಿ ಶುಲ್ಕ ಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಕುಮಾರಸ್ವಾಮಿ ಇದೇ ವೇಳೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News