ಮಂಡ್ಯ ಜಿಲ್ಲೆಯ ಎರಡು ಪೊಲೀಸ್ ಠಾಣೆಗಳು ಸೀಲ್ ಡೌನ್: ಗೃಹ ಸಚಿವ ಬೊಮ್ಮಾಯಿ

Update: 2020-05-22 12:53 GMT

ಮೈಸೂರು,ಮೇ.22; ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೂ ಕೆಲವು ಪೊಲೀಸ್ ಸಿಬ್ಬಂದಿಗಳಿಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡಿದೆ. ಹಾಗಾಗಿ ಪೊಲೀಸ್ ಸಿಬ್ಬಂದಿಗಳಿಗೆ ವೈಜ್ಞಾನಿಕವಾಗಿ ಶಿಫ್ಟ್ ಬದಲಾವಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೈಸೂರಿಗೆ ಶುಕ್ರವಾರ ಆಗಮಿಸಿದ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ.ಆರ್.ಪೇಟೆ, ಬೆಂಗಳೂರು ಮತ್ತು ಶಿವಮೊಗ್ಗದ ಪೊಲೀಸ್ ಓರ್ವರಲ್ಲಿ ಕೊರೋನ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಿಫ್ಟ್ ಬೇಸಿಸ್ ಡ್ಯುಟಿ ಹಾಕಲು ಹೇಳಿದ್ದೇನೆ. 55 ವರ್ಷ ಮೇಲ್ಪಟ್ಟ ಪೊಲೀಸರನ್ನು ಹೊರಗಡೆ ಕಳುಹಿಸದೆ ಪೊಲೀಸ್ ಠಾಣೆ ಒಳಗೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಎರಡು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಪರಿಸ್ಥಿತಿ ನೋಡಿಕೊಂಡು ಅವಶ್ಯಕತೆ ಇದ್ದರೆ ಫ್ರೀಜರ್ ಟೌನ್ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗುವುದು. ಮೈಸೂರು ಜಿಲ್ಲೆಯಲ್ಲಿ ಕೊರೋನ ನಿಯಂತ್ರಿಸು ನಿಟ್ಟಿನಲ್ಲಿ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ. ಆಶಾ ಕಾರ್ಯಕರ್ತೆ, ಪೊಲೀಸರು, ವೈದ್ಯರು ಮತ್ತು ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಮೈಸೂರು ಬಹಳ ವಿಶೇಷವಾದ ಊರು, ಹಾಗಾಗಿ ಇಲ್ಲಿಗೆ ಕೇರಳ, ತಮಿಳುನಾಡು ಕಡೆಗಳಿಂದ ಹೆಚ್ಚಿನ ಜನರು ಬರುತ್ತಾರೆ. ಹಾಗಾಗಿ ಆ ಗಡಿಗಳಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ನೀಡಿರುವುದಾಗಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಇದೇ ವೇಳೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರುಗಳಾದ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಜ್ಯಬಿಲಿಯಂಟ್ ಕಂಪನಿ ಆರಂಭಕ್ಕೆ ಅನುಮತಿ
ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜ್ಯಬಿಲಿಯಂಟ್ ಕಂಪನಿ ಪ್ರಾರಂಭಕ್ಕೆ ಅನುಮತಿ ನೀಡಲಾಗಿದೆ. ಜ್ಯಬಿಲಿಯಂಟ್ ಕಂಪನಿ ಪ್ರಾರಂಭಕ್ಕೆ ಅನುಮತಿ ನೀಡುವುದು ಆರೋಗ್ಯ ಇಲಾಖೆಗೆ ಬಿಟ್ಟಿದ್ದು, ಆದರೆ ಕಂಪನಿ ಆರಂಭಗೊಳ್ಳುವ ಮುನ್ನ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಜ್ಯಬಿಲಿಯಂಟ್ ಫಾರ್ಮಸಿಟಿಕಲ್ ಕಂಪನಿಯಾಗಿರುವುದರಿಂದ ಹೆಚ್ಚು ದಿನ ಬಾಗಿಲು ಹಾಕಲು ಸಾಧ್ಯವಿಲ್ಲ, ಹಾಗಾಗಿ ಕಂಪನಿ ಅವರು, ಕಂಪನಿ ಆರಂಭಕ್ಕೆ ಅನುಮತಿ ಕೇಳಿದ್ದರು ಎಂದು ಬೊಮ್ಮಾಯಿ ಹೇಳಿದರು.

ಜ್ಯಬಿಲಿಯಂಟ್ ಕಂಪನಿ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆಯೇ ಅಂತಿಮ, ಅವರು ಸಹ ಕಂಪನಿ ಪ್ರಾರಾಂಭ ಮಾಡುವ ಮುನ್ನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅದರಂತೆ ಜ್ಯಬಿಲಿಯಂಟ್ ಕಂಪನಿ ಆರಂಭಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News