ಮಡಿಕೇರಿ: ಕೋವಿಡ್ ಆಸ್ಪತ್ರೆಯಲ್ಲಿ 1.06 ಕೋಟಿ ವೆಚ್ಚದ ಪ್ರಯೋಗಾಲಯಕ್ಕೆ ಚಾಲನೆ

Update: 2020-05-22 13:03 GMT

ಮಡಿಕೇರಿ, ಮೇ 22: ಜಿಲ್ಲಾ ಕೇಂದ್ರ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ 1.06 ಕೋಟಿ ರೂ. ವೆಚ್ಚದಲ್ಲಿ ಸಜ್ಜುಗೊಂಡಿರುವ ಕೊರೋನ ಸಾಂಕ್ರಾಮಿಕ ರೋಗವನ್ನು ಪರೀಕ್ಷಿಸುವ ಪ್ರಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮತ್ತು ಗಣ್ಯರು ಚಾಲನೆ ನೀಡಿದರು.

ಕೊರೋನ ಸಾಂಕ್ರಾಮಿಕ ತಡೆಯ ನಿಟ್ಟಿನಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಆರೋಗ್ಯ ತಪಾಸಣೆ ನಡೆಸುವ ಅಗತ್ಯತೆ ಇರುವ ಹಿನ್ನೆಲೆಯಲ್ಲಿ, ವಿಪತ್ತು ಪರಿಹಾರ ನಿಧಿಯಡಿ ಪ್ರಯೋಗಾಲಯವನ್ನು ಕೋವಿಡ್ ಆಸ್ಪತೆಯಲ್ಲಿ ಸ್ಥಾಪಿಸಲಾಗಿದೆ.

ನೂತನ ಪ್ರಯೋಗಾಲಯದಲ್ಲಿ ಒಂದು ಬಾರಿಗೆ 100 ಮಂದಿಯ ಮೂಗು-ಗಂಟಲಿನ ದ್ರವ ಮಾದರಿಗಳನ್ನು ಪರೀಕ್ಷಿಸಬಹುದಾಗಿದೆ. ಈ ಹಿಂದೆ ಶಂಕಿತ ರೋಗಿಯ ಗಂಟಲ ದ್ರವ ಮಾದರಿಗಳನ್ನು ಮೈಸೂರು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟು, ಪರೀಕ್ಷಾ ವರದಿಗೆ ಕಾಯಬೇಕಾಗುತಿತ್ತು. ಇದೀಗ ಇಲ್ಲಿಯೇ ಪ್ರಯೋಗಾಲಯ ಸಜ್ಜುಗೊಂಡಿದ್ದು, ಪರೀಕ್ಷಾ ವರದಿ ಕ್ಷಿಪ್ರಗತಿಯಲ್ಲಿ ದೊರಕುವುದರಿಂದ ಅಗತ್ಯ ಕ್ರಮಗಳನ್ನು ವಿಳಂಬವಿಲ್ಲದೆ ಕೈಗೊಳ್ಳಲು ಸಾಧ್ಯವಾಗಲಿದೆ.

ಪ್ರಯೋಗಾಲಯ ಉದ್ಘಾಟನೆಯ ಸಂದರ್ಭ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಎಂಎಲ್‍ಸಿ ಸುನಿಲ್ ಸುಬ್ರಹ್ಮಣಿ, ಹಿರಿಯ ವ್ಶೆದ್ಯರಾದ ಡಾ. ಪಾಟ್ಕರ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಡಿಹೆಚ್‍ಒ ಡಾ. ಮೋಹನ್, ವೈದ್ಯಕೀಯ ಕಾಲೇಜಿನ ಡೀನ್ ಡಾ. ಕಾರ್ಯಪ್ಪ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News