ಈದ್ ಬಟ್ಟೆ ಖರೀದಿಯ ಹಣ ಬಡವರು, ನಿರಾಶ್ರಿತರಿಗೆ: ಗದಗದ ಮುಸ್ಲಿಂ ಮುಖಂಡರ ನಿರ್ಧಾರ

Update: 2020-05-22 16:34 GMT
ಸಾಂದರ್ಭಿಕ ಚಿತ್ರ

ಗದಗ, ಮೇ 22: ಕೊರೋನ ವೈರಸ್ ತಡೆಗೆ ಜಾರಿಗೊಳಿಸಲಾದ ಲಾಕ್‍ಡೌನ್ ಜನರ ಜೀವನ ಶೈಲಿಯ ಜೊತೆಗೆ ಧಾರ್ಮಿಕ ಆಚರಣೆಗಳನ್ನೂ ಬದಲಿಸುವಂತೆ ಮಾಡಿದೆ. ರಂಝಾನ್ ತಿಂಗಳ ಆಚರಣೆಗಳನ್ನು ಮನೆಯಲ್ಲಿಯೇ ಪೂರೈಸುವಂತೆ ಮಾರ್ಪಡಿಸಿದೆ. ಅದೇ ರೀತಿ ಈದ್ ಕೂಡಾ ಸಂಕ್ಷಿಪ್ತ ಮತ್ತು ಸರಳ ರೀತಿಯಲ್ಲಿ ಆಚರಿಸುವ ನಿರ್ಧಾರಕ್ಕೆ ಮುಸ್ಲಿಂ ಮುಖಂಡರು ಬಂದಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರದ ಲಾಕ್‍ಡೌನ್ ಆದೇಶ ಪಾಲನೆಗೆ ರಾಜ್ಯ ವಕ್ಫ್ ಇಲಾಖೆ ಸೂಚಿಸಿದ್ದು, ಕಟ್ಟು ನಿಟ್ಟಾಗಿ ಪಾಲಿಸಲು ಮುಸ್ಲಿಂ ಮುಖಂಡರು ನಿರ್ಧರಿಸಿದ್ದಾರೆ. ಇದೇ ಆದೇಶ ಪಾಲನೆ ಮಾಡುವಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಜಮಾಅತ್‍ಗಳಿಗೂ ಮುಖಂಡರು ನಿರ್ದೇಶನ ಹೊರಡಿಸಿದ್ದಾರೆ.

ವರ್ತಮಾನದ ದಿನಮಾನಗಳಲ್ಲಿ ಕೇವಲ ಮುಸ್ಲಿಮರಷ್ಟೇ ಅಲ್ಲ, ಇಡೀ ಮನುಕುಲವೇ ಕೊರೋನ ವೈರಸ್‍ನ ಸಂಕಷ್ಟದಲ್ಲಿ ಸಿಲುಕಿ ನರಳುತ್ತಿದೆ. ಬಡವರು, ಕೂಲಿ ಕಾರ್ಮಿಕರು, ಹಮಾಲಿಗಳು, ಮಧ್ಯಮ ವರ್ಗ ಸಹಿತ ಎಲ್ಲರೂ ತೊಂದರೆಗೊಳಗಾಗಿದ್ದಾರೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಆರ್ಥಿಕವಾಗಿ ಸದೃಢರಾದವರು ಈದ್ ಅನ್ನು ಆಡಂಬರದಿಂದ ಆಚರಿಸುವುದು ಸಂಕಷ್ಟದಲ್ಲಿ ಸಿಲುಕಿರುವ ನಿರ್ಗತಿಕರಿಗೆ ತೊಂದರೆ ಕೊಟ್ಟಂತಾಗುತ್ತದೆ ಎನ್ನುವುದು ಧಾರ್ಮಿಕ ಮುಖಂಡರ ಭಾವನೆ.

ಜಿಲ್ಲೆಯ ಬಹುತೇಕ ಮುಸ್ಲಿಮರು ಈ ಬಾರಿ ಹೊಸ ಬಟ್ಟೆ ಖರೀದಿಯಿಂದಲೂ ದೂರ ಉಳಿಯಲು ನಿರ್ಧರಿಸಿದ್ದಾರೆ. ಅದೇ ಹಣವನ್ನು ನೆರೆಯ ಬಡವರು, ನಿರಾಶ್ರಿತರು, ನಿರ್ಗತಿಕರು, ಕೂಲಿ ಕಾರ್ಮಿಕರಿಗೆ, ವಿಧವೆಯರು, ಅಂಗವಿಕಲರಿಗೆ ದಾನ ಮಾಡಿ ಹಬ್ಬದ ಆಚರಣೆಗೆ ಇನ್ನಷ್ಟು ಅರ್ಥ ಕಲ್ಪಿಸುವ ಜವಾಬ್ದಾರಿ ಜನರ ಮೇಲಿದೆ ಎನ್ನುತ್ತಾರೆ ಮುಖಂಡರು.

ಲಾಕ್‍ಡೌನ್ ಸಮಯದಲ್ಲಿ  ಈದ್ ಅನ್ನು ಸರಳವಾಗಿ ಆಚರಿಸುವ ಕುರಿತು ರಾಜ್ಯ ಸರಕಾರ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಗದಗ ಜಿಲ್ಲೆಯ ಮುಸ್ಲಿಮರು ಲಾಕ್‍ಡೌನ್‍ಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಪಾಲಿಸಬೇಕು. ಈದ್ ಅನ್ನು ಎಲ್ಲರೂ ಸರಳವಾಗಿ ಆಚರಿಸಬೇಕು. ಮನೆಯಲ್ಲಿಯೇ ನಮಾಝನ್ನು ನಿರ್ವಹಿಸಬೇಕು. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಜಮಾಅತ್ ಉಲ್ಮಾ- ಎ- ಹಿಂದ್ ಕರ್ನಾಟಕದ ಜಿಲ್ಲಾ ಅಧ್ಯಕ್ಷ ಮೌಲಾನ ಇನಾಯತುಲ್ಲಾ ಪೀರ್‍ಜಾದೆ.

ಬಡವರು, ನಿರ್ಗತಿಕರು, ಅಸಹಾಯಕರು ಹಸಿವಿನಿಂದ ಬಳಲುವುದು ಎಲ್ಲರ ಅರಿವಿಗೆ ಬರಬೇಕು. ರಂಝಾನ್ ವೃತಾಚರಣೆಯು ಆ ಅರಿವನ್ನು ಸ್ವತಃ ಅನುಭವಿಸಲು ಸಹಾಯಕವಾಗಲಿದೆ. ನಿರ್ಗತಿಕರ ಬಗ್ಗೆ ಕನಿಕರ ಭಾವನೆ ಮೂಡಲಿದೆ. ಇಡೀ ಮಾನವ ಕುಲಕ್ಕೇ ಕೊರೋನ ವೈರಸ್ ಕಂಟಕವಾಗಿ ಪರಿಣಮಿಸಿದೆ. ಇದರಿಂದ ಆರ್ಥಿಕ, ಸಾಮಾಜಿಕ, ಧಾರ್ಮಿಕವಾಗಿಯೂ ಸಂಕಷ್ಟ ಎದುರಿಸುವಂತೆ ಮಾಡಿದೆ. ಎಲ್ಲರೂ ಸರಕಾರದ ಆದೇಶಗಳಿಗೆ ಮನ್ನಣೆ ನೀಡಿ, ಕಾನೂನು ಪಾಲಿಸಬೇಕು ಎನ್ನುತ್ತಾತೆ ಮೌಲಾನ ಪೀರ್‍ಜಾದೆ.

ಆಡಂಬರದ ಆಚರಣೆ ಬೇಡ: ಲಾಕ್‍ಡೌನ್ ಸಮಯದಲ್ಲಿ ಸರಕಾರದ ಮಾರ್ಗಸೂಚಿ ಪಾಲಿಸುವುದು ಎಲ್ಲ ನಾಗರಿಕರ ಕರ್ತವ್ಯ. ಈದ್ ಆಚರಣೆ ವೇಳೆ ಯಾವುದೇ ತೆರನಾದ ಹೊಸ ಬಟ್ಟೆ-ಬರೆ ಖರೀದಿಸಬಾರದು. ಅದೇ ಹಣವನ್ನು ಬಡವರಿಗೆ ದಾನ ಮಾಡಬೇಕು. ದಾನ ಮಾಡಿದ್ದನ್ನು ಯಾರೂ ಫೋಟೊ, ವೀಡಿಯೊದಲ್ಲಿ ಸೆರೆ ಹಿಡಿಯಬಾರದು. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ನಿಷ್ಕಲ್ಮಶ ಮನಸ್ಸಿನಿಂದ ಝಕಾತ್ ನೀಡಬೇಕು. ಕೊರೋನ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಎನ್ನುತ್ತಾರೆ ಅವರು.

ಈದ್ ಸಂಭ್ರಮ, ಖರೀದಿಗಾಗಿಯೇ ಸಾಕಷ್ಟ ಖರ್ಚು ಮಾಡುತ್ತಿದ್ದೆವು. ಈ ಲಾಕ್‍ಡೌನ್ ಸಂದರ್ಭದಲ್ಲಿ ಕಷ್ಟದಲ್ಲಿರುವ ಬಡವರಿಗೆ ಆರ್ಥಿಕ ಸಹಾಯ ನೀಡಬೇಕು. ಹಬ್ಬವನ್ನು ಸರಳವಾಗಿ ಆಚರಿಸಬೇಕು. ಈ ಬಗ್ಗೆ ಜಿಲ್ಲೆಯ ಮುಸ್ಲಿಮರಿಗೆ ಮಾಹಿತಿ ನೀಡಿದ್ದೇವೆ.
- ಸಾದಿಕ್ ನರಗುಂದ,
ಗದಗ ಜಿಲ್ಲಾ ಜಾಮೀಯ ಮಸ್ಜಿದ್ ಕಮಿಟಿಯ ಅಧ್ಯಕ್ಷ

ಕಾನೂನು ಪಾಲನೆಯೂ ಒಂದು ರೀತಿಯ ಆರಾಧನೆಯಾಗಿದೆ. ಲಾಕ್‍ಡೌನ್ ಮಾರ್ಗಸೂಚಿಗಳ ಬಗ್ಗೆ ಎಚ್ಚರವಿರಲಿ. ಸಂಭ್ರಮದಲ್ಲಿ ಸುರಕ್ಷಿತ ಅಂತರವನ್ನು ಮರೆಯಬಾರದು. ನಮ್ಮ ಆರೋಗ್ಯ ರಕ್ಷಣೆಯಿಂದ ನೆರೆಹೊರೆಯವರ ಆರೋಗ್ಯವೂ ಚಂದ ಇರಲಿದೆ. ಎಲ್ಲರೂ ಮನೆಯಲ್ಲಿರಬೇಕು. ಸರಳ ಹಬ್ಬ ಆಚರಿಸಬೇಕು.
- ಮೌಲಾನ ಇನಾಯತುಲ್ಲಾ ಪೀರ್‍ಜಾದೆ,
ಜಮಾಅತ್ ಉಲ್ಮಾ- ಎ- ಹಿಂದ್ ಕರ್ನಾಟಕದ ಜಿಲ್ಲಾ ಅಧ್ಯಕ್ಷ

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News