ಪಟ್ಟಣ-ಗ್ರಾಮಾಂತರ ಯೋಜನೆ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

Update: 2020-05-22 16:38 GMT

ಬೆಂಗಳೂರು, ಮೇ 22: ಖಾಸಗಿ ಬಿಲ್ಡರ್ ಗಳು(ಲ್ಯಾಂಡ್ ಡೆವಲಪರ್ಸ್) ಬಡಾವಣೆ ನಿರ್ಮಿಸಿ ಮಾರಾಟ ಮಾಡುವ ಸಂಬಂಧದ 'ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ' ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಶುಕ್ರವಾರ ಅಂಕಿತ ಹಾಕಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಮೇ 14ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇಲ್ಕಂಡ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲು ಅನುಮೋದನೆ ನೀಡಿ, ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತಕ್ಕೆ ರವಾನಿಸಲಾಗಿತ್ತು. ಇದೀಗ ರಾಜ್ಯಪಾಲರು ಸುಗ್ರೀವಾಜ್ಞೆಗೆ ಸಹಿ ಹಾಕಿದ್ದು, ರಾಜ್ಯಪತ್ರವನ್ನು ಪ್ರಕಟಿಸಲಾಗಿದೆ.

ಯಾವುದೇ ಬಡಾವಣೆ ನಿರ್ಮಿಸುವ ಡೆವಲಪರ್ಸ್ ಸಂಪೂರ್ಣವಾಗಿ ಮೂಲ ಸೌಲಭ್ಯ ಕಲ್ಪಿಸದೆ ನಿವೇಶನ ಮಾರಾಟ ಮಾಡಲು ಅವಕಾಶವಿರಲಿಲ್ಲ. ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿವೇಶನ ಮಾರಾಟಕ್ಕೆ ಕಷ್ಟಸಾಧ್ಯವಾಗಿರುವುದರಿಂದ ಕೆಲ ನಿಯಮಗಳನ್ನು ಸಡಿಲಿಕೆಗೆ ಬಿಲ್ಡರ್ ಗಳ ಮನವಿಗಳನ್ನು ಆಧರಿಸಿ ಮೇಲ್ಕಂಡ ಕಾಯ್ದೆ ತಿದ್ದುಪಡಿ ತರಲಾಗಿದೆ ಎಂದು ರಾಜ್ಯ ಸರಕಾರ ಸಮರ್ಥನೆ ನೀಡಿದೆ.

ನಿವೇಶನ ಮಾರಾಟಕ್ಕೆ ಕೆಲ ಷರತ್ತು ವಿಧಿಸಿದ್ದು, ಶೇ.40, ಶೇ.30ರಷ್ಟು ನಿವೇಶನ ಮಾರಾಟ ಮಾಡಬಹುದು. ಹಂತ-ಹಂತವಾಗಿ ಬಡಾವಣೆ ನಿರ್ಮಿಸಿ ಮೂಲಸೌಲಭ್ಯ ಕಲ್ಪಿಸಬೇಕು. ಆದರೆ, ಇದಕ್ಕೆ ಸರಕಾರದ ಒಪ್ಪಿಗೆ ಅಗತ್ಯ ಎಂದು ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ಸುಗ್ರೀವಾಜ್ಞೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News