ಪರಿಹಾರದ ಪ್ಯಾಕೇಜ್ ಫಲಾನುಭವಿಗಳಿಗೆ ತಲುಪಿಸಲು ವಿಪಕ್ಷಗಳು ಆಸ್ಥೆ ವಹಿಸಬೇಕು: ದೇವೇಗೌಡ

Update: 2020-05-22 17:13 GMT

ಬೆಂಗಳೂರು, ಮೇ 22: ಕೊರೋನ ವೈರಸ್ ಸೋಂಕಿನ ವಿರುದ್ಧ ಹೋರಾಟ ನಡೆಸಿ ದೇಶವನ್ನು ಸಹಜ ಸ್ಥಿತಿಗೆ ತರುವುದರ ಜೊತೆಗೆ ಕೇಂದ್ರ ಸರಕಾರದ ಪರಿಹಾರ ಯೋಜನೆಗಳು ಫಲಾನುಭವಿಗಳಿಗೆ ತಲುಪುತ್ತಿವೆಯೇ ಎಂಬ ಬಗ್ಗೆ ವಿಪಕ್ಷಗಳು ಆಸ್ಥೆ ವಹಿಸಬೇಕಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಸಲಹೆ ಮಾಡಿದ್ದಾರೆ.

ಶುಕ್ರವಾರ ಪ್ರತಿಪಕ್ಷಗಳ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ನಡೆಸಿದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ದೇವೇಗೌಡ, ಕೊರೋನ ಸೋಂಕು ತಡೆಗೆ ಹೇರಿರುವ ಲಾಕ್‍ಡೌನ್‍ನಿಂದಾಗಿ ದೇಶದ ಆರ್ಥಿಕತೆ ಕುಸಿದಿದೆ. ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಕ್ರಮ ವಹಿಸಬೇಕಿದೆ.

ಆರ್ಥಿಕ ಚೇತರಿಕೆಗೆ ಕಷ್ಟಪಡಬೇಕಾದ ಅನಿವಾರ್ಯತೆ ಇದೆ. ರೈತರು ತಮ್ಮ ಕೃಷಿ ಉತ್ಪನ್ನಗಳ ಮೇಲೆ ಅವಲಂಬಿತರಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜೊತೆಗೆ ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ. ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇವುಗಳಿಗೆ ಪರಿಹಾಕ ಕಂಡುಕೊಳ್ಳಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ಕೇಂದ್ರ ಸರಕಾರ ಸಂಕಷ್ಟಕ್ಕೆ ಸಿಲುಕಿರುವವರಿಗೆ 20 ಲಕ್ಷ ಕೋಟಿ ರೂ. ಪರಿಹಾರ ಘೋಷಿಸಿದೆ. ಆದರೆ, ಇದು ಫಲಾನುಭವಿಗಳಿಗೆ ಹೇಗೆ ತಲುಪಲಿದೆ ಎಂಬುದು ಮುಖ್ಯ. ಕೂಲಿ ಕಾರ್ಮಿಕರು ಸೇರಿದಂತೆ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಕೇಂದ್ರದ ನೆರವು ತಲುಪಿಸಲು ವಿಪಕ್ಷಗಳ ಶ್ರಮಿಸಬೇಕಿದೆ ಎಂದು ದೇವೇಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News