ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಒಂದೇ ದಿನ 47 ಮಂದಿಗೆ ಕೊರೋನ ಪಾಸಿಟಿವ್

Update: 2020-05-22 17:29 GMT

ಚಿಕ್ಕಬಳ್ಳಾಪುರ, ಮೇ.22: ಜಿಲ್ಲೆಗೆ ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದಿಂದ ಬಂದ ಸುಮಾರು 247 ಮಂದಿ ವಲಸೆ ಕಾರ್ಮಿಕರನ್ನು ತಪಾಸಣೆಗೆ ಒಳಪಡಿಸಿದ್ದು, ಇಲ್ಲಿಯವರೆಗೆ 47 ಮಂದಿಗೆ ಸೋಂಕು ದೃಢ ಪಟ್ಟಿದ್ದು, 63 ಮಂದಿಯ ವರದಿ ನೆಗೆಟೀವ್ ಬಂದಿದೆ. ಉಳಿದ 139 ಮಂದಿ ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್ ಲತಾ ರವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮಹಾರಾಷ್ಟ್ರದಿಂದ ಜಿಲ್ಲೆಗೆ ಖಾಸಗಿ ಬಸ್‍ಗಳ ಮೂಲಕ ತವರು ಜಿಲ್ಲೆಗೆ 247 ಮಂದಿ ವಲಸೆ ಕಾರ್ಮಿಕರು ಆಗಮಿಸಿದ್ದು, ಹಳೆಯ 26 ಕೊರೋನ ಪ್ರಕರಣಗಳು ಹಾಗೂ ಇಂದಿನ ಹೊಸದಾದ 47 ಪ್ರಕರಣಗಳು ಸೇರಿ ಒಟ್ಟಾರೆ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.  

ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಹೊರ ರಾಜ್ಯಗಳಿಂದ ಬಂದವರಲ್ಲಿ ಮಾತ್ರ ಕೊರೋನ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ಮಹಾರಾಷ್ಟ್ರದಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಆಗಮಿಸಿದ 247 ಜನರ ವಲಸೆ ಕಾರ್ಮಿಕರಲ್ಲಿ 138 ಜನ ಗೌರಿಬಿದನೂರು ತಾಲೂಕಿನವರು ಹಾಗೂ ಬಾಗೇಪಲ್ಲಿಗೆ 109 ಜನ ವಲಸೆ ಕಾರ್ಮಿಕರು ಆಗಮಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಉಪವಿಭಾಗಾಧಿಕಾರಿ ರಘುನಂದನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News