ಕಾರವಾರ: ತಾಂತ್ರಿಕ ದೋಷದಿಂದ ಹಡಗಿನಲ್ಲಿ ತೈಲ ಸಿಡಿದು ಓರ್ವನಿಗೆ ಗಾಯ

Update: 2020-05-22 18:00 GMT

ಕಾರವಾರ, ಮೇ.22: ಕಾರವಾರದ ವಾಣಿಜ್ಯ ಬಂದರಿಗೆ ಬಿಟುಮಿನ್ ತುಂಬಿಕೊಂಡು ಬಂದಿದ್ದ ವರ್ಧಮಾನ ಎಂಬ ಹೆಸರಿನ ಹಡಗಿನಲ್ಲಿನ ಬಾಯ್ಲರ್ ನಲ್ಲಿ ತಾಂತ್ರಿಕ ದೋಷ ಉಂಟಾಗಿ ತೈಲ ಸಿಡಿದ ಪರಿಣಾಮ ಓರ್ವ ಗಾಯಗೊಂಡಿದ್ದಾನೆ. 

ಓಡಿಶಾ ಮೂಲದ ಬೆರಾಂಪುರ ಮೂಲದ ವ್ಯಕ್ತಿ ಬಾಯ್ಲರ್ ಆಪರೇಟರ್ ಗುರುಗೋವಿಂದ ಗಾಯಾಳು ಎಂದು ಗುರುತಿಸಲಾಗಿದೆ. ಹಡಗಿನ ಆಯಿಲ್ ಬ್ಯಾಕ್ಅಪ್ ಬಾಯ್ಲರ್ ನಲ್ಲಿ ತೈಲ ಸಿಡಿದಿದ್ದು, ಗುರುಗೋವಿಂದ ಕಿವಿಯ ಹಿಂಭಾಗ, ಮುಖ ಹಾಗೂ ಹೊಟ್ಟೆಯ ಮೇಲೆ ಬಿಸಿ ಆಯಿಲ್ ಬಿದ್ದು ಸುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಘಟನೆಯ ನಂತರ ಬಂದರು ಇಲಾಖೆಯ ಅಧಿಕಾರಿಗಳು ಭಾರತೀಯ ನೌಕಾದಳಕ್ಕೆ ವಿನಂತಿಸಿದ ಹಿನ್ನಲೆಯಲ್ಲಿ ನೌಕಾದಳದ ಅಧಿಕಾರಿಗಳು ಬೋಟ್ ಒಂದರಲ್ಲಿ ಘಟನಾ ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಗುರುವಾರ ತಡ ರಾತ್ರಿ ಕಾರವಾರಕ್ಕೆ ಕರೆ ತಂದಿದ್ದಾರೆ.

ಗಾಯಾಳುವಿಗೆ ಮೊದಲು ಹಡಗಿನಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿದ್ದು, ನಂತರ ನೌಕಾದಳದ ಪೊಲೀಸರು ಈತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ನೌಕಾನೆಲೆಯ ಪಿಆರ್.ಒ ಅಜಯ್ ಕಪೂರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News