ಬಳ್ಳಾರಿ: ಶ್ರಮಿಕ ರೈಲಿನ ಮೂಲಕ ಜಾರ್ಖಂಡ್‍ಗೆ ತೆರಳಿದ 1,550 ವಲಸಿಗರು

Update: 2020-05-22 18:06 GMT

ಬಳ್ಳಾರಿ, ಮೇ 22: ಬಳ್ಳಾರಿ ರೈಲ್ವೆ ನಿಲ್ದಾಣದಿಂದ 1550 ಜನ ಜಾಖರ್ಂಡ್ ವಲಸಿಗರನ್ನು ಹೊತ್ತ ಶ್ರಮಿಕ ವಿಶೇಷ ರೈಲು ಉತ್ತರ ಪ್ರದೇಶದತ್ತ ಶುಕ್ರವಾರ ಬೆಳಗ್ಗೆ ತೆರಳಿತು.

ಬಳ್ಳಾರಿ ರೈಲ್ವೆ ನಿಲ್ದಾಣದಿಂದ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಅಪರ ಜಿಲ್ಲಾಧಿಕಾರಿ ಮಂಜುನಾಥ, ಅಪರ ಪೊಲೀಸ್ ವರಿಷ್ಠಾ ಧಿಕಾರಿ ಬಿ.ಎನ್.ಲಾವಣ್ಯ, ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್ ಕಾಂಡೂ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಡಿವೈಎಸ್ಪಿ ರಾಮರಾವ್ ಸೇರಿದಂತೆ ಅನೇಕರು ಸುರಕ್ಷಿತವಾಗಿ ತಮ್ಮೂರನ್ನು ತಲುಪಿ ಮತ್ತೇ ಬಳ್ಳಾರಿ ಜಿಲ್ಲೆಗೆ ಅತ್ಯಂತ ಖುಷಿಯಿಂದ ಬನ್ನಿ ಎಂದು ಶುಭಹಾರೈಸಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.

ಬಳ್ಳಾರಿ, ತೋರಣಗಲ್ಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ಜೀವನ ನಿರ್ವಹಣೆಗೆ ಬಂದಿದ್ದ ಜಾರ್ಖಂಡ್ ರಾಜ್ಯದ 1550 ಜನ ವಲಸಿಗರನ್ನು ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಹಾಗೂ ತೋರಣಗಲ್ಲುವಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಅವರಿಗೆ ಪ್ರಮಾಣಪತ್ರ ವಿತರಿಸಿ ಹಾಗೂ ಅಲ್ಲಿಯೆ ಟಿಕೆಟ್ ಅನ್ನು ಇವರಿಗೆ ನೀಡಲಾಗಿತ್ತು.

ಆ ವಲಸಿಗರನ್ನು ಅವರಿಗೆ ನೀಡಲಾದ ಟಿಕೆಟ್ ಹಿಂಬದಿಯಲ್ಲಿ ಬರೆಯಲಾದ ಸೀಟ್ ಸಂಖ್ಯೆ ಮತ್ತು ಬೋಗಿ ನೋಡಿಕೊಂಡು ಅವರನ್ನು ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಸಂಬಂಧಿಸಿದ ಬೋಗಿಯಲ್ಲಿ ಕುಳಿತುಕೊಳ್ಳುವಂತೆ ಬೆಳಗ್ಗೆ 7ರಿಂದಲೇ ತಿಳಿಸುತ್ತಿದ್ದರು.

ಈ ವಲಸಿಗ ಪ್ರಯಾಣಿಕರು ಪ್ರಯಾಣದ ಸಂದರ್ಭದಲ್ಲಿ ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಎರಡು ಬಿಸ್ಕಟ್ ಪ್ಯಾಕೇಟ್, ಎರಡು ಬ್ರೇಡ್ ಪ್ಯಾಕ್, ಮೂರು ಲೀಟರ್ ನೀರು, ಎರಡು ಪ್ಯಾಕೇಟ್ ಆಹಾರ ಪೊಟ್ಟಣ, ಮಿರ್ಚಿ ಬಜ್ಜಿ ಹಾಗೂ ಇನ್ನಿತರ ಆಹಾರ ಸಾಮಗ್ರಿಗಳ ಆಹಾರ ಕಿಟ್‍ಗಳನ್ನು ಪ್ರತಿಯೊಬ್ಬ ವಲಸಿಗರಿಗೂ ಜಿಲ್ಲಾಡಳಿತದ ವತಿಯಿಂದ ನೀಡಲಾಯಿತು.

ರೈಲ್ವೆ ನಿಲ್ದಾಣದೊಳಗೆ ಆಗಮಿಸುತ್ತಲೆ ವಲಸಿಗ ಪ್ರಯಾಣಿಕರಿಗೆ ಸ್ಯಾನಿಟೈಸರ್ ಕೈಗೆ ಸಿಂಪಡಿಸಲಾಗುತ್ತಿತ್ತು. ರೆಡ್ ಕ್ರಾಸ್ ಸಂಸ್ಥೆಯವರು ಇದೇ ಸಂದರ್ಭದಲ್ಲಿ ಮಾಸ್ಕ್ ಗಳನ್ನು ಹಾಗೂ ಲಘು ಉಪಹಾರ ವಿತರಿಸಿದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಅಪರ ಜಿಲ್ಲಾಧಿಕಾರಿ ಮಂಜುನಾಥ,ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಎಎಸ್ಪಿ ಲಾವಣ್ಯ ಅವರು ಸ್ಥಳದಲ್ಲಿಯೇ ಉಪಸ್ಥಿತರಿದ್ದು ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿನ  ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News