ಚೀನಾ ಬ್ಯಾಂಕ್‍ಗಳಿಗೆ 5,446 ಕೋ.ರೂ. ಸಾಲ ಮರುಪಾವತಿಸಿ: ಅನಿಲ್ ಅಂಬಾನಿಗೆ ಲಂಡನ್ ಕೋರ್ಟ್ ಆದೇಶ

Update: 2020-05-23 08:56 GMT

ಹೊಸದಿಲ್ಲಿ :  ಸಾಲ ಒಪ್ಪಂದವೊಂದರಂತೆ ಚೀನಾದ ಮೂರು ಬ್ಯಾಂಕುಗಳಿಗೆ ಸಾಲ ಮರುಪಾವತಿಸಲು  ವಿಫಲರಾದ  ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಗೆ ಮುಂದಿನ 21 ದಿನಗಳೊಳಗಾಗಿ  ಸುಮಾರು 717 ಮಿಲಿಯನ್ ಡಾಲರ್ ( ಸುಮಾರು ರೂ 5,446 ಕೋಟಿ)  ಪಾವತಿಸುವಂತೆ ಇಂಗ್ಲೆಂಡ್‍ನ ನ್ಯಾಯಾಲಯ  ಆದೇಶಿದೆ.

ಫೆಬ್ರವರಿ 2012ರಲ್ಲಿ ರಿಲಿಯನ್ಸ್ ಕಮ್ಯುನಿಕೇಶನ್ಸ್  ಚೀನಾದ ಮೂರು ಬ್ಯಾಂಕ್‍ಗಳಿಂದ  ಪಡೆದ 700 ಮಿಲಿಯನ್ ಡಾಲರ್‍ಗೆ ಅನಿಲ್ ಅಂಬಾನಿ ವೈಯಕ್ತಿಕ ಗ್ಯಾರಂಟಿ ಒದಗಿಸಿದ್ದರು. ಆದರೆ ಈಗ ಅವರ ಕಂಪೆನಿ ಆರ್ಥಿಕ ದಿವಾಳಿತನ ಘೋಷಿಸಿದೆಯಲ್ಲದೆ ಸಾಲ ಮರುಪಾವತಿಸಲೂ ವಿಫಲವಾಗಿರುವುದರಿಂದ ಮೂರೂ ಬ್ಯಾಂಕ್‍ಗಳು- ಕಮರ್ಷಿಯಲ್ ಬ್ಯಾಂಕ್ ಆಫ್ ಚೈನಾ ಲಿ. ಮುಂಬೈ ಶಾಖೆ, ಚೈನಾ ಡೆವಲೆಪ್ಮೆಂಟ್ ಬ್ಯಾಂಕ್ ಹಾಗೂ ಎಕ್ಸಿಮ್ ಬ್ಯಾಂಕ್ ಆಫ್ ಚೈನಾ- ನ್ಯಾಯಾಲಯದ ಮೆಟ್ಟಿಲು  ಹತ್ತಿ ಬಡ್ಡಿ ಸಹಿತ ಸಾಲ ವಾಪಸ್ ನೀಡಬೇಕೆಂದು ಕೋರಿದ್ದವು.

ತಾವು ನೀಡಿದ ವೈಯಕ್ತಿಕ ಗ್ಯಾರಂಟಿಯನ್ನು ಅನಿಲ್ ಅಂಬಾನಿ ಗೌರವಿಸಬೇಕೆಂದು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ಲಂಡನ್ ಹೈಕೋರ್ಟ್‍ನ ವಾಣಿಜ್ಯ ವಿಭಾಗದ ನ್ಯಾಯಾಧೀಶ ನಿಗೆಲ್ ಹೇಳಿದರು.

ಆದರೆ ಅನಿಲ್ ಅಂಬಾನಿ ಪರವಾಗಿ ವೈಯಕ್ತಿಕ ಗ್ಯಾರಂಟಿ ನೀಡಲು ಯಾರಿಗೂ ಅಧಿಕಾರ ನೀಡಲಾಗಿರಲಿಲ್ಲ ಎಂದು ಅಂಬಾನಿ ಕಚೇರಿ ವಾದಿಸುತ್ತಲೇ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News