ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಬದಲಾಯಿಸಿಕೊಳ್ಳಲು ಅವಕಾಶ

Update: 2020-05-23 17:04 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 23: ಕೋವಿಡ್-19 ಲಾಕ್‍ಡೌನ್‍ನಿಂದಾಗಿ ವಸತಿ ನಿಲಯ, ವಸತಿ ಶಾಲೆಗಳಲ್ಲಿ ವಾಸ್ತವ್ಯ ಇದ್ದಂತಹ ಎಸೆಸೆಲ್ಸಿ ವಿದ್ಯಾರ್ಥಿಗಳು ಮೂಲ ಕೇಂದ್ರದಿಂದ ಪರೀಕ್ಷೆ ಬರೆಯಲು ಸಾಧ್ಯವಿಲ್ಲದಿದ್ದಲ್ಲಿ, ಶಾಲೆಯ ಮುಖ್ಯ ಶಿಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸದ್ಯ ತಾವು ವಾಸ ಮಾಡುತ್ತಿರುವ ಮನೆಗೆ ಹತ್ತಿರವೇ ಇರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.

ಪರೀಕ್ಷಾ ಕೇಂದ್ರದ ಬದಲಾವಣೆ ಮಾಡಿಕೊಳ್ಳಲು ಮೇ 29 ಕೊನೆಯ ದಿನವಾಗಿರುತ್ತದೆ. ಸದರಿ ದಿನಾಂಕದೊಳಗೆ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಳ್ಳದ ವಿದ್ಯಾರ್ಥಿಗಳು ತಮ್ಮ ಮೂಲ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯುವುದು ಕಡ್ಡಾಯವಾಗಿರುತ್ತದೆ. ಈಗಾಗಲೇ ನಿಗದಿ ಪಡಿಸಲಾಗಿರುವ ಪರೀಕ್ಷಾ ಕೇಂದ್ರದ ತಾಲೂಕಿನ ಒಳಗಡೆಯೇ ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶವಿರುವುದಿಲ್ಲ.

ಪರೀಕ್ಷಾ ಕೇಂದ್ರದ ಬದಲಾವಣೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಹಳೆಯ ನೋಂದಣಿ ಸಂಖ್ಯೆಯೇ ಮುಂದುವರಿಯುವುದು. ಪ್ರಸ್ತುತ ಓದುತ್ತಿರುವ ಶಾಲೆಯ ಮುಖ್ಯ ಶಿಕ್ಷಕರಿಂದ ವಾಟ್ಸ್ ಆ್ಯಪ್ ಮೂಲಕ ಪ್ರವೇಶ ಪತ್ರವನ್ನು ಪಡೆದು ಅದರ ಒಂದು ನಕಲು ಪ್ರತಿಯನ್ನು ತೆಗೆದುಕೊಂಡು ಪರೀಕ್ಷಾ ಹಾಜರಾಗಬಹುದಾಗಿದೆ.

ಒಮ್ಮೆ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡ ನಂತರ ಈ ಹಿಂದೆ ನಿಗದಿಪಡಿಸಿದ್ದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಪರೀಕ್ಷಾ ಕೇಂದ್ರದ ಬದಲಾವಣೆಗೆ ಮುಂಚೆ ವಿದ್ಯಾರ್ಥಿಯು ವಸತಿ ಶಾಲೆ, ವಸತಿ ನಿಲಯ, ವಲಸೆ ಕಾರ್ಮಿಕ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಯೆಂದು ಮುಖ್ಯ ಶಿಕ್ಷಕರು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.

ಪರೀಕ್ಷಾ ಕೇಂದ್ರವನ್ನು ಬದಲಾವಣೆ ಮಾಡಿಕೊಳ್ಳುವುದಕ್ಕಾಗಲಿ ಅಥವಾ ಪ್ರವೇಶ ಪತ್ರವನ್ನು ಪಡೆದುಕೊಳ್ಳುವುದಕ್ಕಾಗಲಿ ಯಾವುದೇ ಶುಲ್ಕ ಇರುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಅಥವಾ ಅಡಚಣೆ ಉಂಟಾದಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ದೂ.080-23310075, 23310076 ಹಾಗೂ 9739131393ಕ್ಕೆ ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News