ಜ್ಯುಬಿಲಿಯಂಟ್ ಗೆ ಕೊರೋನ ಹರಡಿದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತನಿಖೆಯಾಗಬೇಕು: ದಸಂಸ ಒತ್ತಾಯ

Update: 2020-05-23 16:53 GMT

ಮೈಸೂರು,ಮೇ.23: ಇಡೀ ವಿಶ್ವಕ್ಕೆ ಕೊರೋನ ಹರಡಲು ಜ್ಯುಬಿಲಿಯಂಟ್ ಕಂಪನಿ ಮಾಲಕ ಶಾ ಬಾಟಿಯಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೆ ಪ್ರಮುಖ ಕಾರಣಕರ್ತರು ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಹಾಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ತನಿಖೆಯಾಗಬೇಕು ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯ ಮಾಡಿದೆ.

ನಗರದ ನಜರ್ ಬಾದ್‍ನಲ್ಲಿರುವ ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ನಂಜನಗೂಡಿನ ಜ್ಯುಬಿಲಿಯಂಟ್ ಕಂಪನಿ ನೌಕರನಲ್ಲಿ ಕಾಣಿಸಿಕೊಂಡ ಕೊರೋನ ಸೋಂಕು ಇಡೀ ಜಿಲ್ಲೆಯನ್ನೇ ಆತಂಕಕ್ಕೆ ದೂಡಿತ್ತು. ಆ ನೌಕರನಿಗೆ ಯಾವ ಮೂಲದಿಂದ ಬಂತು ಎಂಬುದನ್ನು ಇದುವರೆಗೂ ಪತ್ತೆ ಮಾಡಿ ಬಹಿರಂಗ ಪಡಿಸಿಲ್ಲ, ಮೊದಲಿಗೆ ಕೇಂದ್ರ ಗೃಹ ಇಲಾಖೆ ಇದರ ತನಿಖೆ ಮಾಡಿಸುತ್ತಿದೆ ಎಂದು ಹೇಳಿದರು. ನಂತರ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತರನ್ನು ತನಿಖೆ ಮಾಡುವಂತೆ ಹೇಳಿದರು. ಆದರೆ ಅವರು ಸ್ಥಳೀಯ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಅವರನ್ನು ವಾಪಸ್ ಕರೆಸಿಕೊಂಡರು. ಇದನ್ನೆಲ್ಲಾ ನೋಡಿದರೆ ಸಾರ್ವಜನಿಕರಿಗೆ ಹಲವು ಅನುಮಾನಗಳು ಮೂಡುತ್ತವೆ ಎಂದು ಹೇಳಿದರು.

ಕೊರೋನ ಜ್ಯುಬಿಲಿಯಂಟ್‍ಗೆ ಮಾತ್ರ ಬಂದಿಲ್ಲ, ಇಡೀ ವಿಶ್ವಕ್ಕೆ ಬಂದಿದೆ. ಅಂತಹದರಲ್ಲಿ ಜ್ಯುಬಿಲಿಯಂಟ್ ನೌಕರನಿಗೆ ಕಾಣಿಸಿಕೊಂಡ ಕೊರೋನ ಮೂಲವನ್ನು ಏಕೆ ಬಹಿರಂಗಪಡಿಸುತ್ತಿಲ್ಲ? ಇದರ ಹಿಂದೆ ಜ್ಯುಬಿಲಿಯಂಟ್ ಮಾಲಕ ಮತ್ತು ಮೋದಿಯ ಕೈವಾಡ ಏನಾದರೂ ಅಡಗಿದಿಯೇ ಎಂಬ ಸಂಶಯ ಮೂಡುತ್ತಿದೆ ಎಂದು ಕಿಡಿಕಾರಿದರು.

ಜ್ಯುಬಿಲಿಯಂಟ್ ಔಷಧ ತಯಾರಿಕಾ ಕಂಪನಿಯಾಗಿದೆ. ಇಲ್ಲಿಗೆ ಚೀನಾದಿಂದ ಕಚ್ಚಾ ಸಾಮಾಗ್ರಿಗಳು ಬರುತ್ತವೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಜ್ಯುಬಿಲಿಯಂಟ್ ಕಂಪನಿಯವರೇ ಏಕೆ ಚೀನಾಕ್ಕೆ ಕೊರೋನ ಹರಡುವಂತೆ ಮಾಡಿರಬಾರದು? ಇದರ ಮಾಲಕ ಗುಜರಾತ್ ಮೂಲದವರು, ಪ್ರಧಾನಿ ಮೋದಿ ಅವರು ಗುಜರಾತ್‍ನವರು, ಇವರಿಬ್ಬರ ಒಳ ಒಪ್ಪಂದದಿಂದ ಇಂತಹ ಸಂದಿಗ್ದ ಪರಿಸ್ಥಿತಿ ಬಂದೊದಗಿದೆ ಎಂದರೆ ತಪ್ಪಾಗಲಾರದು. ಹಾಗಾಗಿ ಪ್ರಕರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ತನಿಖೆಯಾಗಬೇಕು, ಜ್ಯುಬಿಲಿಯಂಟ್ ಮಾಲಕನ ವಿರುದ್ಧ ಮೊದಲು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಈ ಎಲ್ಲಾ ಹಿನ್ನಲೆಯಿಂದ ಸರ್ಕಾರವು ಜ್ಯುಬಿಲಿಯಂಟ್ ಕಂಪನಿ ಮಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಈ ದುರ್ಘಟನೆಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಸಿ ಕೊರೋನ ಸೋಂಕಿನಿಂದ ಸಂಕಷ್ಟಕ್ಕೀಡಾದವರಿಗೆಲ್ಲಾ ಸದರಿ ಕಂಪನಿ ವತಿಯಿಂದ ನಷ್ಟವನ್ನು ಬರಿಸಬೇಕು ಎಂದು ಒತ್ತಾಯಿಸಿದರು. ತಪ್ಪಿದಲ್ಲಿ ಒಂದು ವಾರದ ಗಡುವಿನ ನಂತರ ನ್ಯಾಯಕ್ಕಾಗಿ ಒತ್ತಾಯಿಸಿ ಸರ್ಕಾರಗಳ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಮುಖಂಡರುಗಳಾದ ಕೆ.ವಿ.ದೇವೇಂದ್ರ, ಯಡದೊರೆ ಮಹದೇವಯ್ಯ, ಮೂಡಳ್ಳಿ ಮಹದೇವ್, ಶಿವರಾಜ್ ಆಲತ್ತೂರು, ಶಿವಮೂರ್ತಿ, ಟಿ.ಎಂ.ಗೋವಿಂದರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News