ಬಸ್ ಸಂಚಾರ ಬಂದ್: ಕಾರವಾರದ ಬಸ್ ನಿಲ್ದಾಣದಲ್ಲಿ ಸಿಲುಕಿದ ತಾಯಿ-ಮಗಳು

Update: 2020-05-24 18:39 GMT

ಕಾರವಾರ: ಕೊಡಗು ಜಿಲ್ಲೆಯಿಂದ ಗೋವಾ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳಲು ಬಂದಿದ್ದ ತಾಯಿ-ಮಗಳು ಕಾರವಾರದ ಬಸ್ ನಿಲ್ದಾಣದಲ್ಲಿ ಸಿಲುಕಿದ ಘಟನೆ ರವಿವಾರ ನಡೆದಿದೆ. ಮಹಾರಾಷ್ಟ್ರದ ರತ್ನಗಿರಿಗೆ ಹೋಗಲು ಇಬ್ಬರು ಶನಿವಾರ ತಡ ರಾತ್ರಿ ಬಂದಿದ್ದರು. ರವಿವಾರ ಲಾಕ್ಡೌನ್ ಆಗಿದ್ದರಿಂದ ಬಸ್ ಸಂಚಾರ ಬಂದ್ ಆಗಿದ್ದರಿಂದ ನಿಲ್ದಾಣದಲ್ಲೇ ಲಾಕ್ ಆಗಿದ್ದಾರೆ.

ತಾಯಿ ಮಹಾರಾಷ್ಟ್ರ ದಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಈ ಹಿಂದೆ ಲಾಕ್ ಡೌನ್ ಆಗುವ ಮೊದಲು ಇಬ್ಬರೂ ಮಹಾರಾಷ್ಟ್ರದಿಂದ ಕೊಡಗಿನ ವಿರಾಜಪೇಟೆಗೆ ಹೋಗಿದ್ದರು. ಇದೀಗ 4.0 ಲಾಕ್ ಡೌನ್ ಸಡಿಲಿಕೆಯಿಂದಾಗಿ ಇವರು ವಾಪಸ್ ಮಹಾರಾಷ್ಟ್ರಕ್ಕೆ ಹೋಗಲು ಬಂದಿದ್ದರು. ಆದರೆ ಕಾರವಾರಕ್ಕೆ ಬಂದ ಬಳಿಕ ಮುಂದೆ ಹೋಗಲು ಸಾಧ್ಯವಾಗಿಲ್ಲ. 

ಇದರಿಂದ ರಾತ್ರಿ ಬಸ್ ನಿಲ್ದಾಣದಲ್ಲೇ ಊಟ, ತಿಂಡಿ ಇಲ್ಲದೆ ರಾತ್ರಿ ಕಳೆದಿದ್ದಾರೆ. ಅವರ ಬಳಿ ಇದ್ದ ಬಿಸ್ಕತ್ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದಾರೆ. ಬೆಳಗ್ಗೆ ಮಹಾರಾಷ್ಟಕ್ಕೆ ಹೊಗಲು ಸಾಧ್ಯಗದೆ ಇದ್ದರಿಂದ ಊಟ, ತಿಂಡಿ ಇಲ್ಲದೆ ಹಸಿವಿನಲ್ಲಿ ಬಳಲುತ್ತಿದ್ದ ತಾಯಿ-ಮಗಳನ್ನು ಕಂಡ ಕಾರವಾರ ಸಂಚಾರಿ ಠಾಣೆಯ ಪಿಎಸ್ಐ ನಿಂಗಣ್ಣ ಜಕ್ಕಣ್ಣನವರ್ ಅವರು ತಿಂಡಿ, ಕುಡಿಯಲು ನೀರು ನೀಡಿ ಸಹಕರಿಸಿದ್ದಾರೆ. 

ಸದ್ಯ ಬಂದ್ ಆಗಿದ್ದರಿಂದ ಮಹಾರಾಷ್ಟ್ರಕ್ಕೆ ತೆರಳಲು ಸಾಧ್ಯವಿಲ್ಲ. ಸಾರಿಗೆ ವ್ಯವಸ್ಥೆ ನಾಳೆ ಆರಂಭವಾಗಲಿದ್ದು ಗೋವಾ ಮೂಲಕ ಮಹಾರಾಷ್ಟ್ರಕ್ಕೆ ತೆರಳುವಂತೆ ಪಿಎಸ್ಐ ತಿಳಿಸಿದರು. ಸದ್ಯ ತಾಯಿ-ಮಗಳನ್ನು ಹೊಟೇಲ್ ಒಂದರಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದು, ಸೋಮವಾರ ಬಸ್ ಸಂಚಾರ ಆರಂಭವಾದ ಬಳಿಕ ಅವರನ್ನ ಗೋವಾ ಮೂಲಕ ಮಹಾರಾಷ್ಟ್ರಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News