ಕೊರೋನ ನಿಯಂತ್ರಣಕ್ಕೆ ಬಾರದೆ ಎಸೆಸೆಲ್ಸಿ ಪರೀಕ್ಷೆ ಬೇಡ: ರೈತ, ವಿದ್ಯಾರ್ಥಿ ಸಂಘಟನೆ, ಶಿಕ್ಷಣ ತಜ್ಞರಿಂದ ಸಿಎಂಗೆ ಪತ್ರ

Update: 2020-05-25 14:14 GMT

ಬೆಂಗಳೂರು, ಮೇ 25: ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಾರದ ಪರಿಸ್ಥಿತಿಯಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಸುವುದು ಸೂಕ್ತವಲ್ಲವೆಂದು ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆ, ದಲಿತ, ರೈತ ಹಾಗೂ ಮಹಿಳಾ ಸಂಘಟನೆಗಳು ರಾಜ್ಯ ಸರಕಾರವನ್ನು ಒತ್ತಾಯಿಸಿವೆ.

ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ವೇದಿಕೆ, ರಾಜ್ಯ ರೈತ ಸಂಘ, ಭಾರತ ಜ್ಞಾನ ವಿಜ್ಞಾನ ಸಮಿತಿ, ರಾಜ್ಯ ಮಹಿಳಾ ಒಕ್ಕೂಟ, ಕರ್ನಾಟಕ ವಿದ್ಯಾರ್ಥಿ ಸಂಘ, ರಾಜ್ಯ ನಿವೃತ್ತ ಶಿಕ್ಷಣ ಅಧಿಕಾರಿಗಳ ವೇದಿಕೆ, ದಸಂಸ ಸೇರಿದಂತೆ ಹಲವು ಜನಪರ ಸಂಘಟನೆಗಳ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದು, ಕೋವಿಡ್-19 ಹಿನ್ನೆಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಸುವ ನಿರ್ಧಾರವನ್ನು ಕೈಬಿಡುವ ಮೂಲಕ ವಿದ್ಯಾರ್ಥಿ, ಶಿಕ್ಷಕರ ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಹಾಗೂ ಎಲ್ಲ ಮಕ್ಕಳನ್ನು ತೇರ್ಗಡೆ ಮಾಡಬೇಕೆಂದು ಮನವಿ ಮಾಡಿವೆ.

ಈ ಬಾರಿ ರಾಜ್ಯದಲ್ಲಿ 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹಾಗೂ 2.2 ಲಕ್ಷ ಶಿಕ್ಷಕರು ಪರೀಕ್ಷಾ ಕಾರ್ಯ ನಿರ್ವಹಿಸಲಿದ್ದಾರೆ. ಇವರಲ್ಲಿ ಯಾರಿಗಾದರು ಸೋಂಕು ಉಂಟಾಗಿ ಜೀವಕ್ಕೆ ಅಪಾಯವಾದರೆ ಅವರ ಕುಟುಂಬದ ಪರಿಸ್ಥಿತಿಯೇನು. ಪರೀಕ್ಷೆ ಮುಗಿಯುವವರೆಗೆ ವಿದ್ಯಾರ್ಥಿ ಹಾಗೂ ಶಿಕ್ಷಕರ ಕುಟುಂಬ ಆತಂಕದಿಂದಲೇ ದಿನದೂಡುವಂತಹ ಪರಿಸ್ಥಿತಿ ಎದುರಾಗಿದೆ. ಪರೀಕ್ಷೆಯ ಜೊತೆಗೆ ಭಯ, ಆತಂಕ, ಉದ್ವೇಗ ಹಾಗೂ ಒತ್ತಡ ಹೆಚ್ಚಾಗಿ ಬೇರೆ ರೀತಿಯ ಅಪಾಯಗಳು ಎದುರಾಗುವ ಸಂಭವವಿದೆ.

ರಾಮನಗರ ಹೊರತು ಪಡಿಸಿ ಎಲ್ಲ ಜಿಲ್ಲೆಗಳು ಕೋವಿಡ್ ಕಂಟೈನ್ಮೆಂಟ್ ಝೋನ್‍ನಲ್ಲಿವೆ. ಉಳಿದಿರುವ ಕೇಂದ್ರಗಳು ಹೋಬಳಿ ಮತ್ತು ತಾಲೂಕು ಮಟ್ಟದ ಕ್ಲಸ್ಟರ್ ಕೇಂದ್ರಗಳಾಗಿರುವುದರಿಂದ ವಿವಿಧ ಊರುಗಳ ವಿದ್ಯಾರ್ಥಿ, ಪೋಷಕರು, ಶಿಕ್ಷಕರು ಸಾರ್ವಜನಿಕ ವಾಹನ, ಖಾಸಗಿ ವಾಹನಗಳಲ್ಲಿ ಪರೀಕ್ಷೆ ಕೇಂದ್ರಕ್ಕೆ ಬರುವುದರಿಂದ ಸೋಂಕು ತಗುಲುವ ಅಪಾಯ ಹೆಚ್ಚಿರುತ್ತದೆ. ಜ್ವರ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡುತ್ತೇವೆಂದು ಹೇಳಲಾಗಿದೆ. ಕೋವಿಡ್-19 ಜ್ವರ ಒಂದೇ ಲಕ್ಷಣವಲ್ಲ. ಹೀಗಾಗಿ ಇದೆಲ್ಲವು ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತದೆ.

ಪರೀಕ್ಷೆ ನಂತರ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಶಿಕ್ಷಕರಿಗೆ ಕೋವಿಡ್-19 ವಿಚಾರದಲ್ಲಿ ಮತ್ತೊಮ್ಮೆ ಆತಂಕಕ್ಕೆ ಕಾರಣವಾಗುತ್ತದೆ. ಹಾಗೂ ಫಲಿತಾಂಶ ಬಂದ ನಂತರ ಮರು ಪರೀಕ್ಷೆಗೆ ತಯಾರಿ ನಡೆಸುವುದು ಹೀಗೆ ಸಾಲು, ಸಾಲು ಸವಾಲುಗಳಿಗೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಭಯದಿಂದಲೇ ತಯಾರಿ ಮಾಡಿಕೊಳ್ಳುವಂತಹ ಪರಿಸ್ಥಿತಿಗೆ ಸರಕಾರ ನೂಕುವುದು ಸರಿಯಲ್ಲ. ಈಗಾಗಲೇ ರಾಜ್ಯದಲ್ಲಿ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಸೇರಿದಂತೆ ಬಡವ ಹಾಗೂ ಮಧ್ಯಮ ವರ್ಗದ ಜನತೆ ಕೊರೋನ ಲಾಕ್‍ಡೌನ್‍ನಿಂದಾಗಿ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರ ಜೊತೆಗೆ ಎಸೆಸೆಲ್ಸಿ ಪರೀಕ್ಷೆ ನಡೆಸುವ ಮೂಲಕ ಮತ್ತೊಂದು ಸಂಕಷ್ಟಕ್ಕೆ ವಿದ್ಯಾರ್ಥಿಗಳನ್ನು, ಅವರ ಪೋಷಕರನ್ನು ಸಿಲುಕಿಸುವುದು ಬೇಡ.

ಈಗಾಗಲೇ ಹಲವು ರಾಜ್ಯಗಳು ಎಸೆಸೆಲ್ಸಿ ಪರೀಕ್ಷೆ ರದ್ದುಮಾಡಿ ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿವೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳ ಅವರ ಹಿಂದಿನ ಶೈಕ್ಷಣಿಕ ಪ್ರತಿಭೆ, ಕಾರ್ಯಕ್ಷಮತೆಯನ್ನು ನೋಡಿ ಎಲ್ಲ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ತೇರ್ಗಡೆಯ ಪ್ರಮಾಣ ಪತ್ರ ನೀಡಬೇಕು. ಕೋವಿಡ್‍ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿ, ಪೋಷಕರು ಹಾಗೂ ಶಿಕ್ಷಕರನ್ನು ಜೀವಭಯದಿಂದ ರಕ್ಷಿಸಬೇಕೆಂದು ಪತ್ರಿಕಾ ಪ್ರಕಟನೆಯ ಮೂಲಕ ಒತ್ತಾಯಿಸಲಾಗಿದೆ.

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ದಸಂಸ ಸಂಚಾಲಕ ಮಾವಳ್ಳಿ ಶಂಕರ್, ಪ್ರಾಥಮಿಕ ಶಿಕ್ಷಕರ ಫೆಡರೇಶನ್‍ನ ಬಸವರಾಜ ಗುರಿಕಾರ, ಶಿಕ್ಷಣ ತಜ್ಞ ನಿರಂಜನಾರಾಧ್ಯ, ರಾಜ್ಯ ನಿವೃತ್ತ ಶಿಕ್ಷಕ, ಅಧಿಕಾರಿಗಳ ವೇದಿಕೆಯ ಜಗನ್ನಾಥರಾವ್, ರಾಜ್ಯ ಅಂಗನವಾಡಿ ಸಂಘಟನೆಯ ಜಯಮ್ಮ, ಎಸ್‍ಐಒ ಕಾರ್ಯದರ್ಶಿ ಮುಹಮ್ಮದ್ ಪೀರ್ ಲಟಗೇರಿ, ಕರ್ನಾಟಕ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಶ್ರೀಪಾದ್ ಭಟ್, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸರೋವರ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News