ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ

Update: 2020-05-25 14:45 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 25: ಬಂಗಾಳ ಕೊಲ್ಲಿ, ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ರಾಜ್ಯದ ಒಳನಾಡು ಹಾಗೂ ಕರಾವಳಿಯಲ್ಲಿ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೂರು ದಿನಗಳ ಕಾಲ ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದು ಮುಂಗಾರು ಪೂರ್ವ ಮಳೆಯಾಗಿದೆ. ಜೂನ್ ಮೊದಲ ವಾರವೇ ಮುಂಗಾರು ರಾಜ್ಯಕ್ಕೆ ಪ್ರವೇಶಿಸಲಿದ್ದು, ಅಲ್ಲಿಯವರೆಗೆ ಮುಂಗಾರು ಪೂರ್ವ ಮಳೆ ಸುರಿಯಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ಉತ್ತರ ಒಳನಾಡಿನ ಕೆಲವೆಡೆ ಒಣ ಹವೆ ಮುಂದುವರೆಯಲಿದ್ದರೂ ಕೆಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಆದರೆ, ಭಾರೀ ಮಳೆಯಾಗುವ ಯಾವುದೇ ಸೂಚನೆಗಳಿಲ್ಲ. ಕೆಲವು ಭಾರಿ ಬಿಸಿ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಯೂ ಇದೆ. ಆದರೆ, ಇದು ತಾತ್ಕಾಲಿಕ ಮಾತ್ರ ಎಂದು ಹೇಳಿದ್ದಾರೆ.

ಮೂರು ದಿನ ಬೆಂಗಳೂರಿನಲ್ಲೂ ಮಳೆ: ರವಿವಾರದಿಂದ ಮುಂಗಾರು ಪೂರ್ವ ಮಳೆ ಬೆಂಗಳೂರಿನಲ್ಲಿ ಚುರುಕಾಗಿದ್ದು ಇನ್ನು ಮೂರು ದಿನಗಳ ಕಾಲ ಕೆಲವು ಸಂದರ್ಭದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ, ರವಿವಾರದ ರೀತಿಯೇ ಮೂರು ದಿನಗಳ ಕಾಲ ಮಳೆ ಸುರಿಯಲಿದೆ. ಬಿರುಸಿನ ಗಾಳಿ ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ಜನತೆ ಎಚ್ಚರದಿಂದಿರಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News