ದಿಲ್ಲಿಯಿಂದ ಖರೀದಿಸಿದ್ದ ವೆಂಟಿಲೇಟರ್ ಗಳು ಕಳಪೆ: ವಾಪಸ್ ನೀಡಲು ರಾಜ್ಯ ಸರಕಾರ ನಿರ್ಧಾರ

Update: 2020-05-25 15:24 GMT

ಬೆಂಗಳೂರು, ಮೇ 25: ಕೊರೋನ ವೈರಸ್‍ನಿಂದ ಬಳಲುವವರಿಗೆಂದು ಖರೀದಿ ಮಾಡಲಾಗಿರುವ ವೆಂಟಿಲೇಟರ್ ಗಳು ಕಳಪೆ ಗುಣಮಟ್ಟದಾಗಿದ್ದು ಅವುಗಳನ್ನು ವಾಪಸ್ ನೀಡಲು ಸರಕಾರ ನಿರ್ಧರಿಸಿದೆ.

ಕೊರೋನ ವೈರಸ್ ಸೋಂಕಿತರು ಉಸಿರಾಟದ ತೊಂದರೆಗೆ ಸಿಲುಕಿದ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನೀಡುವ ಸಲುವಾಗಿ ದಿಲ್ಲಿಯಿಂದ ಖರೀದಿ ಮಾಡಿದ್ದ 15 ವೆಂಟಿಲೇಟರ್ ಗಳು ಕಳಪೆ ಗುಣಮಟ್ಟದ್ದಾಗಿದೆ ಎಂದು ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಅವುಗಳನ್ನು ವಾಪಸ್ ಮಾಡಲು ಸರಕಾರ ಮುಂದಾಗಿದೆ.

ರಾಜ್ಯ ಡ್ರಗ್ ಲಾಜಿಸ್ಟಿಕ್ಸ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಯು ದೆಹಲಿಯ ಆರ್.ಕೆ.ಮೆಡಿಕಲ್ ಸಲ್ಯೂಶಸ್ಸ್ ಕಂಪನಿಯಿಂದ 15 ವೆಂಟಿಲೇಟರ್ ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಕಂಪನಿಯು ಎ.14ರಂದು ಡ್ರ್ಯಾಗರ್ ಹೆಸರಿನ 15 ವೆಂಟಿಲೇಟರ್ ಗಳನ್ನು ಸರಬರಾಜು ಮಾಡಿತ್ತು. ಬಳಿಕ ವೆಂಟಿಲೇಟರ್ ಗಳನ್ನು ಪರಿಶೀಲಿಸಲು ತಂತ್ರಜ್ಞರನ್ನು ಕಳುಹಿಸಿಕೊಡುವಂತೆ ರಾಜ್ಯ ಸರಕಾರ ಕಂಪನಿಗೆ ಪತ್ರ ಬರೆದು ತಿಳಿಸಿತ್ತು. ಆದರೆ, ಇದಕ್ಕೆ ಕಂಪನಿಯಿಂದ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬಂದಿಲ್ಲ. ಬಳಿಕ ಸೊಸೈಟಿಯ ತಜ್ಞರಿಂದಲೇ ಗುಣಮಟ್ಟವನ್ನು ಪರೀಕ್ಷೆ ಮಾಡಿಸಲಾಗಿದ್ದು, ಈ ವೇಳೆ ವೆಂಟಿಲೇಟರ್ ಗಳು ಕಳಪೆ ಗುಣಮಟ್ಟದ್ದು ಎಂಬುದು ಬಹಿರಂಗಗೊಂಡಿದೆ.

ಇದಾದ ನಂತರ ಎ. 28ರಂದೇ ಸೊಸೈಟಿಯ ಹೆಚ್ಚುವರಿ ನಿರ್ದೇಶಕರು ಕಂಪನಿಗೆ ನೋಟಿಸ್ ನೀಡಿದ್ದು, ವೆಂಟಿಲೇಟರ್ ಗಳಲ್ಲಿ ಕಂಡು ಬಂದಿರುವ ದೋಷಗಳನ್ನು ಪಟ್ಟಿ ಮಾಡಿ ತಿಳಿಸಿದೆಯಲ್ಲದೆ, ಎಲ್ಲಾ ವೆಂಟಿಲೇಟರ್ ಗಳನ್ನು ಕಂಪನಿಯು ತನ್ನ ಖರ್ಚಿನಲ್ಲಿಯೇ ವಾಪಸ್ ತೆಗೆದುಕೊಂಡು ಹೋಗಬೇಕು ಎಂದು ಸೂಚಿಸಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News