ಧರ್ಮದ ಹೆಸರಲ್ಲಿ ಮನಸ್ಸುಗಳನ್ನು ಒಡೆಯುವವರ ಮಧ್ಯೆ ಭವಿಷ್ಯದ ಬಗ್ಗೆ ಭರವಸೆ ಮೂಡಿಸಿದ ಯುವಕರು

Update: 2020-05-25 16:18 GMT

ಬೆಂಗಳೂರು, ಮೇ 25: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಹಿಂದೂ ಯುವಕನನ್ನು ರಕ್ಷಿಸಲು ಪ್ರಾಣದ ಹಂಗು ತೊರೆದು ನದಿಗೆ ಹಾರಿದ ನಾಲ್ವರು ಮುಸ್ಲಿಮ್ ಯುವಕರ ಪ್ರಯತ್ನಕ್ಕೆ ಶಹಭಾಸ್ ಹೇಳಲೇಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಧರ್ಮದ ಹೆಸರಲ್ಲಿ ಮನೆ-ಮನಸ್ಸುಗಳನ್ನು ಒಡೆಯುವ ವಿಚ್ಛಿದ್ರಕಾರಿ ಕೃತ್ಯಗಳ ನಡುವೆ ಭವಿಷ್ಯದ ಬಗ್ಗೆ ಭರವಸೆ ಮೂಡಿಸಿರುವ ಈ ಯುವಕರ ಕಾರ್ಯ ಉಳಿದವರಿಗೆ ಮಾದರಿಯಾದದ್ದು. ಇವರಿಗೆ ನನ್ನ ಅಭಿನಂದನೆಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ: ರವಿವಾರ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಕೊಳಕೀರು ನಿವಾಸಿ ನಿಶಾಂತ್ ಇಲ್ಲಿನ ಪಾಣೆಮಂಗಳೂರು ಹಳೆ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದಾರೆ. ವಿಷಯ ತಿಳಿದ ನದಿ ಸಮೀಪದ ನಿವಾಸಿ ಮುಹಮ್ಮದ್ ಗೂಡಿನಬಳಿ ಎಂಬುವವರು ಆತನನ್ನು ರಕ್ಷಿಸಲು ನದಿಗೆ ಜಿಗಿದಿದ್ದಾರೆ. ಅವರ ಬೆನ್ನಿಗೆ ಇತರ ಮೂರು ಮಂದಿ ಯುವಕರು ನದಿಗೆ ಧುಮುಕಿ ನಿಶಾಂತ್‍ನನ್ನು ಮೇಲಕ್ಕೆತ್ತಿದ್ದಾರೆ. ಆದರೆ, ಯುವಕ ಅಷ್ಟೊತ್ತಿಗಾಗಲೇ ಸಾವನ್ನಪ್ಪಿದ್ದಾನೆ.

ಅಕ್ಕರಂಗಡಿ ನೆಹರೂ ನಗರದ ಹೈವೇ ಇನ್ ಹೊಟೇಲ್ ಮಾಲಕ ರಹೀಂ ಎಂಬುವರ ಪುತ್ರ ಅರೀಫ್ ಹೈವೇ, ನಿಶಾಂತನನ್ನು ಉಳಿಸುವುದಕ್ಕಾಗಿ ಆತನ ಬಾಯಿಗೆ ತನ್ನ ಬಾಯಿಯನ್ನು ಇಟ್ಟು ಊದುವ ಮೂಲಕ ಉಸಿರಾಡುವಂತೆ ಮಾಡಲು ಪ್ರಯತ್ನಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News