ಉದ್ಯಮಿಗಳ ಲಾಬಿಗೆ ಮಣಿದು ಕಾರ್ಮಿಕ ಕಾಯ್ದೆ ತಿದ್ದುಪಡಿ: ಪ್ರಿಯಾಂಕ್ ಖರ್ಗೆ

Update: 2020-05-25 17:02 GMT

ಬೆಂಗಳೂರು, ಮೇ 25: ಕೈಗಾರಿಕೋದ್ಯಮಿಗಳ ಲಾಬಿಯ ಒತ್ತಡಕ್ಕೆ ಮಣಿದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕ ವಿರೋಧಿ ನೀತಿ ಜಾರಿಗೆ ತರಲು ಮುಂದಾಗಿವೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಟೀಕಿಸಿದ್ದಾರೆ.

ದೇಶದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಹೇರಿರುವ ಲಾಕ್‍ಡೌನ್ ಅವಧಿಯನ್ನು ದುರ್ಬಳಕೆ ಮಾಡಿಕೊಂಡು ಕಾರ್ಮಿಕರ ಕೆಲಸದ ಅವಧಿಯನ್ನು 8ರಿಂದ 10ಗಂಟೆಗೆ ವಿಸ್ತರಿಸಿದೆ. ಇದು ಕಾರ್ಮಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದ್ದು, ಅವರ ಬಲವಂತದ ದುಡಿಮೆಗೆ ತಳ್ಳುತ್ತದೆ ಎಂದು ಅವರು ಇದೇ ಎಚ್ಚರಿಕೆ ನೀಡಿದ್ದಾರೆ.

ಕಾರ್ಮಿಕರ ದುಡಿಮೆಯ ಅವಧಿ ಹೆಚ್ಚಳ ಮಾಡಿರುವುದು ಕೈಗಾರಿಕಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಕಾರ್ಮಿಕರ ಕಲ್ಯಾಣ, ಅವರಿಗೆ ವಿಶೇಷ ಹಕ್ಕುಗಳನ್ನು ನೀಡಿ ದುಡಿಯುವ ಜನರನ್ನು ಶೋಷಣೆಯಿಂದ ಮುಕ್ತಗೊಳಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು 1942ರಲ್ಲಿ ರೂಪಿಸಿದ್ದ ಕಾನೂನು ತಿದ್ದುಪಡಿ ಮೂಲಕ ಕಾರ್ಮಿಕರನ್ನು ಶೋಷಣೆ ದೂಡಲಾಗಿದೆ.

ಈಗಾಗಲೇ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶದಲ್ಲಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕಾರ್ಮಿಕ ಕಾಯ್ದೆ ದುರ್ಬಲಗೊಳಿಸುವ ಮೂಲಕ ಕಾರ್ಮಿಕ ಸಂಘಟನೆಗಳನ್ನು ಹತ್ತಿಕ್ಕಿ, ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡುವ ಹುನ್ನಾರ ಇದಾಗಿದೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News