ಹೊರ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ನಿಯಮ ಸಡಿಲ

Update: 2020-05-26 12:10 GMT

ಬೆಂಗಳೂರು, ಮೇ 26: ಹೊರ ರಾಜ್ಯದಿಂದ ಬಂದವರು ಇನ್ನು ಮುಂದೆ ನೇರವಾಗಿ ಕ್ವಾರ್ಯಂಟೈನ್‍ಗೆ ಹೋಗಬೇಕಾಗಿಲ್ಲ. ರಾಜ್ಯಕ್ಕೆ ಬರುವ ಮುನ್ನ ಕೊರೋನ ತಪಾಸಣೆ ಮಾಡಿಸಿದ್ದರೆ ಅವರನ್ನು ನೇರವಾಗಿ ಮನೆಗೆ ಕಳುಹಿಸಲಾಗುತ್ತದೆ.

ಅಕ್ಕಪಕ್ಕದ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕಕ್ಕೆ ಬರುತ್ತಿದ್ದಾರೆ. ಬಂದವರನ್ನು ನೇರವಾಗಿ ಕ್ವಾರಂಟೈನ್‍ಗೆ ಕಳುಹಿಸಲಾಗುತ್ತಿದೆ. 14 ದಿನಗಳ ಕಾಲ ಕ್ವಾರಂಟೈನ್ ಮಾಡಿದ ನಂತರವೇ ಅವರನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಇದೆ. ಆದರೆ, ಈಗ ಕ್ವಾರಂಟೈನ್ ಮಾಡುವ ನಿಯಮದಲ್ಲಿ ಸಡಿಲ ಮಾಡಲಾಗಿದೆ.

ಕೊರೋನ ಪರೀಕ್ಷೆ ಮಾಡಿಸಿಕೊಂಡು ಆ ವರದಿಯೊಂದಿಗೆ ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್‍ನಿಂದ ವಿನಾಯಿತಿ ಸಿಗಲಿದೆ. ಆದರೆ, ಇದಕ್ಕೂ ನಿಯಮಾವಳಿಯನ್ನು ರೂಪಿಸಲಾಗಿದೆ. ಆ ವರದಿ 2 ದಿನಗಳಲ್ಲಿ ನೀಡಿದ್ದಾಗಿರಬೇಕು ಮತ್ತು ಐಸಿಎಂಆರ್ ಅನುಮೋದಿತ ಪ್ರಯೋಗಾಲಯಗಳಲ್ಲಿ ಮಾತ್ರ ಕೊರೋನ ಪರೀಕ್ಷೆ ಆಗಿರಬೇಕು ಎಂದು ರಾಜ್ಯ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ವರದಿಗೆ ಸಂಬಂಧಿಸಿದಂತೆ ಅನುಮಾನ ಬಂದಲ್ಲಿ ವರದಿ ನೀಡಿರುವ ಪ್ರಯೋಗಾಲಯದಿಂದ ಪಡೆದ ನಂತರವಷ್ಟೇ ಹೊರ ರಾಜ್ಯದಲ್ಲಿ ಪರೀಕ್ಷೆ ಮಾಡಿಸಿಕೊಂಡು ಬಂದ ಪ್ರಯಾಣಿಕರನ್ನು ಅವರವರ ಮನೆಗೆ ಕಳುಹಿಸಲಾಗುತ್ತದೆ. ಹಾಗೆಯೇ ಮನೆಗೆ ಹೋದವರ ಮೇಲೂ ಕೆಲ ದಿನಗಳ ಕಾಲ ಕಣ್ಣಿಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News