ಜಿಮ್‍ಗಳ ಆರಂಭ ಸದ್ಯಕ್ಕಿಲ್ಲ: ಸಚಿವ ಆರ್. ಅಶೋಕ್

Update: 2020-05-26 13:01 GMT

ಬೆಂಗಳೂರು, ಮೇ 26: ಲಾಕ್‍ಡೌನ್ ಸಡಿಲಿಕೆ ಮಾಡಿ ಕ್ಷೌರದ ಅಂಗಡಿ, ಬ್ಯೂಟಿ ಪಾರ್ಲರ್‍ಗಳ ಆರಂಭಕ್ಕೆ ಹಸಿರು ನಿಶಾನೆ ನೀಡಿರುವ ರಾಜ್ಯ ಸರಕಾರ ಜಿಮ್‍ಗಳ ಆರಂಭಕ್ಕೆ ಇನ್ನೂ ಕೆಲ ದಿನಗಳ ಕಾಲ ಅವಕಾಶವಿಲ್ಲ ಎಂದು ಹೇಳಿದೆ. 

ಈ ಕುರಿತು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದು, ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊರೋನ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿನಲ್ಲಿ ವ್ಯಾಪಕವಾಗಿ ಸೋಂಕು ಹರಡುವುದನ್ನು ತಡೆಗಟ್ಟಲಾಗಿದೆ. ಕೆಲವು ವಿಷಯಗಳಿಗೆ ಆದ್ಯತೆ ನೀಡಿ ಸಡಿಲ ಮಾಡಲಾಗಿದೆ. ಆದರೆ, ಜಿಮ್‍ಗಳಿಗೆ ತಕ್ಷಣಕ್ಕೆ ಅವಕಾಶ ನೀಡುವುದು ಬೇಡ ಎಂಬ ನಿರ್ಧಾರಕ್ಕೆ ಸರಕಾರ ಬಂದಿದೆ ಎಂದರು.

ಕೊರೋನ ನಿಯಂತ್ರಿಸುವಲ್ಲಿ ಬೆಂಗಳೂರು ನಗರ ಯಶ ಕಂಡಿದೆ. ಇದಕ್ಕೆ ಕೇಂದ್ರ ಸರಕಾರ ಪ್ರಶಂಸೆ ಮಾಡಿದ್ದು ಸಂತಸ ತಂದಿದೆ. ಇದಕ್ಕೆ ನಮ್ಮ ವೈದ್ಯ ಸಿಬ್ಬಂದಿ, ಅಧಿಕಾರಿ ವರ್ಗ ಸೇರಿ ಎಲ್ಲ ಇಲಾಖೆಗಳ ಶ್ರಮವೂ ಕಾರಣ ಎಂದು ತಿಳಿಸಿದರು.

ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಮುದಾಯಗಳಿಗೆ ಈಗಾಗಲೇ ಸಹಾಯಧನ ಘೋಷಣೆ ಮಾಡಿದ್ದೇವೆ. ನೇಕಾರರು, ಕ್ಷೌರಿಕ ವೃತ್ತಿ ಅವರಿಗೂ ಸಂಕಷ್ಟ ಇತ್ತು. ಆ ಸಮುದಾಯಗಳನ್ನು ಗುರುತಿಸಿದ್ದೇವೆ. ನಮ್ಮ ರಾಜ್ಯದ ಹಣಕಾಸು ಸ್ಥಿತಿ ಬಗ್ಗೆಯು ನೋಡಬೇಕಿದೆ. ಮುಂದಿನ ದಿನಗಳಲ್ಲಿ ಕೆಲ ಸಮುದಾಯಗಳಿಗೆ ಸಹಾಯಧನ ನೀಡುವ ಬಗ್ಗೆ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ಮುದ್ರಾಂಕ ಶುಲ್ಕಕ್ಕೆ ರಿಯಾಯಿತಿ ಕೊಡುವ ಬಗ್ಗೆ ಚಿಂತನೆ ನಡೆದಿದೆ. ತಮಿಳುನಾಡು ಸರಕಾರ ಅಪಾರ್ಟ್‍ಮೆಂಟ್ ನೋಂದಣಿ ಶುಲ್ಕದಲ್ಲಿ ರಿಯಾಯಿತಿ ಕೊಟ್ಟಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News