'ಪರಿವಾರ-ತಳವಾರ' ಎಸ್ಟಿ ಪಟ್ಟಿಗೆ ಸೇರ್ಪಡೆ: ಕೂಡಲೇ ಅಧಿಸೂಚನೆ ಹೊರಡಿಸಲು ಕೋರಿ ಸಿಎಂಗೆ ಸಿದ್ದರಾಮಯ್ಯ ಪತ್ರ

Update: 2020-05-26 14:30 GMT

ಬೆಂಗಳೂರು, ಮೇ 26: `ಪರಿವಾರ ಮತ್ತು ತಳವಾರ' ಸಮುದಾಯಗಳನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಯಿಂದ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿ ಎರಡು ತಿಂಗಳಾದರೂ ರಾಜ್ಯ ಸರಕಾರ ತನ್ನ ರಾಜ್ಯಪತ್ರದಲ್ಲಿ ಇದುವರೆಗೂ ಆದೇಶ ಹೊರಡಿಸಿಲ್ಲ. ಈ ಸಂಬಂಧ ಕೂಡಲೇ ಅಧಿಸೂಚನೆ ಹೊರಡಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಕೋರಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಸ್ತುತ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಾರಂಭವಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಜಾತಿ ಪ್ರಮಾಣ ಪತ್ರ ಅಗತ್ಯವಾಗಿದೆ. ಜೊತೆಗೆ ಕೆಪಿಎಸ್ಸಿ ಮತ್ತು ಇತರೆ ಪ್ರಾಧಿಕಾರಗಳು ವಿವಿಧ ಉದ್ಯೋಗಗಳ ನೇಮಕಾತಿಗಳಿಗೆ ಅಧಿಸೂಚನೆ ಹೊರಡಿಸಿವೆ/ಹೊರಡಿಸುತ್ತಿವೆ. ಆದುದರಿಂದ ಈಗಾಗಲೇ ಹೊರಡಿಸಿರುವ ಉದ್ಯೋಗ ಸಂಬಂಧಿ ಅಧಿಸೂಚನೆಗಳಲ್ಲಿ ತಳವಾರ ಮತ್ತು ಪರಿವಾರ ಎರಡು ಪಂಗಡಗಳನ್ನು ಪರಿಶಿಷ್ಟ ಪಂಗಡ ಎಂದು ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

2002ರ ಮಾರ್ಚ್ 30ರಂದು ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಗಿತ್ತು. ಆದರೆ, ಈ ಸಮುದಾಯ ಅತ್ಯಂತ ಹಿಂದುಳಿದಿದ್ದು, ಮೈಸೂರು, ಚಾಮರಾಜನಗರ, ಮಂಡ್ಯ, ತುಮಕೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತಿದೆ ಎಂದು ಉಲ್ಲೇಖಿಸಿದ್ದಾರೆ.

ಮೇಲ್ಕಂಡ ಎರಡು ಸಮುದಾಯಗಳನ್ನು ಪರಿಶಿಷ್ಟ ಪಂಗಡ(ಎಸ್ಟಿ)ದ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಕೋರಿ 2014ರ ಫೆಬ್ರವರಿ 25ರಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಕೇಂದ್ರ ಸರಕಾರ ಸುದೀರ್ಘ 6 ವರ್ಷಗಳ ಬಳಿಕ 2020 ಮಾರ್ಚ್ 19ರಂದು ಅಂತಿಮವಾಗಿ ಅಧಿಸೂಚನೆ ಹೊರಡಿಸಿದೆ. ವಿಳಂಬ ಮಾಡಿಯಾದರೂ ರಾಜ್ಯಪತ್ರ ಹೊರಡಿಸಿರುವುದರಿಂದ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸುವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News