ಜೂ.30 ರವರೆಗೂ ಅಂಗನವಾಡಿಗಳಿಗೆ ರಜೆ ವಿಸ್ತರಣೆ

Update: 2020-05-26 14:46 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 26: ಕೊರೋನ ವೈರಸ್ ಸೋಂಕಿನಿಂದ ಫಲಾನುಭವಿಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳಿಗೆ ಜೂ.30ರವರೆಗೆ ರಜೆಯನ್ನು ವಿಸ್ತರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಪ್ರಸ್ತುತ ಅಂಗನವಾಡಿ ಕೇಂದ್ರಗಳಿಗೆ ಜೂ.1ರಿಂದ 15ರವರೆಗೆ ರಜೆ ಘೋಷಿಸಲಾಗಿದೆ. ಇದೀಗ ಜೂ.16ರಿಂದ ಜೂ.30ರವರೆಗೆ ಬೇಸಿಗೆ ರಜೆಯನ್ನು ನೀಡಲಾಗಿರುತ್ತದೆ. ಒಟ್ಟಾರೆಯಾಗಿ ಜೂ.30ರವರೆಗೆ ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡಲಾಗಿದೆ. ಈ ಅವಧಿಯಲ್ಲಿ ಪ್ರತಿ ಫಲಾನುಭವಿಗಳ ಮನೆ ಬಾಗಿಲಿಗೆ ಪೂರಕ ಪೌಷ್ಠಿಕ ಆಹಾರವನ್ನು ಈ ಹಿಂದಿನ ಮಾರ್ಗಸೂಚಿಯಂತೆ ವಿತರಿಸಲು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.

ಬೇಸಿಗೆ ರಜೆ ಒಳಗೊಂಡಂತೆ ಘೋಷಿಸಿರುವ ರಜಾ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಪ್ರತಿದಿನ ಕೇಂದ್ರಕ್ಕೆ ಹಾಜರಾಗಿ ಅಂಗನವಾಡಿ ಕೇಂದ್ರಗಳನ್ನು ತೆರೆಯುವಂತಿಲ್ಲ. ಆದರೆ, ಅವಶ್ಯಕತೆ ಇದ್ದಾಗ ಮತ್ತು ಪೂರಕ ಪೌಷ್ಠಿಕ ಆಹಾರವನ್ನು ಫಲಾನುಭವಿಗಳ ಮನೆ ಬಾಗಿಲಿಗೆ ನೀಡುವ ಸಮಯದಲ್ಲಿ ಮಾತ್ರ ಕೇಂದ್ರಗಳನ್ನು ತೆರೆಯಲು ಅನುಮತಿಸಲಾಗಿದೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಚುಚ್ಚುಮದ್ದು, ಆರೋಗ್ಯ ತಪಾಸಣೆ ಮಾಡಲು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಮಾತ್ರ ಫಲಾನುಭವಿಗಳನ್ನು ಕೇಂದ್ರಗಳಿಗೆ ಕರೆ ತಂದು ಆರೋಗ್ಯ ತಪಾಸಣೆ ಮಾಡಿಸಲು ಅವಕಾಶ ನೀಡಲಾಗಿದೆ. ಅಲ್ಲದೆ ಆರೋಗ್ಯ ಇಲಾಖೆಯಿಂದ ಕಾರ್ಯಕರ್ತೆ ಅಥವಾ ಸಹಾಯಕಿಯರನ್ನು ಕೋವಿಡ್ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಿದ್ದಲ್ಲಿ ಸಮೀಕ್ಷಾ ದಿನಗಳಲ್ಲಿ ಕಡ್ಡಾಯವಾಗಿ ಹಾಜರಾಗತಕ್ಕದ್ದು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News