ಜೂನ್ 1ರಿಂದ ದೇವಸ್ಥಾನಗಳ ಬಾಗಿಲು ತೆರೆಯಲು ಕ್ರಮ: ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2020-05-26 15:45 GMT

ಬೆಂಗಳೂರು, ಮೇ 26: ಕೊರೋನ ವೈರಸ್ ಸೋಂಕು ತಡೆಗೆ ಹೇರಿರುವ ಲಾಕ್‍ಡೌನ್ ಅವಧಿ ಮೇ 31ಕ್ಕೆ ಮುಕ್ತಾಯಗೊಳ್ಳಲಿದ್ದು, ಜೂನ್ 1ರಿಂದ ರಾಜ್ಯದ ಎಲ್ಲ ದೇವಸ್ಥಾನಗಳ ಬಾಗಿಲು ತೆರೆಯಲು ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲ ದೇವಸ್ಥಾನಗಳು ನನ್ನ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಭಕ್ತರ ಅನುಕೂಲಕ್ಕಾಗಿ ಜೂನ್ 1ರಿಂದ ದೇವಸ್ಥಾನಗಳ ಬಾಗಿಲು ತೆರೆಯಲಾಗುವುದು. ಮಸೀದಿ ಮತ್ತು ಚರ್ಚ್‍ಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ನನ್ನ ಇಲಾಖೆಗೆ ಸಂಬಂಧಿಸಿದ ವಿಚಾರವನ್ನಷ್ಟೇ ನಾನು ಹೇಳಲು ಸಾಧ್ಯ ಎಂದು ಪ್ರತಿಕ್ರಿಯೆಗೆ ನಿರಾಕರಿಸಿದರು.

ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ 52 ಪ್ರಮುಖ ದೇವಳಗಳಲ್ಲಿ ನಾಳೆಯಿಂದ ಆನ್‍ಲೈನ್ ಸೇವೆ ಆರಂಭಿಸಲಿದ್ದು, ಬುಕ್ಕಿಂಗ್ ಮಾಡಬಹುದಾಗಿದೆ. ಸರಳ ವಿವಾಹ ಪ್ರೋತ್ಸಾಹಿಸುವ ದೃಷ್ಟಿಯಿಂದ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಸಾಮೂಹಿಕ ವಿವಾಹವನ್ನು 50 ಜನರ ಮಿತಿಗೊಳಿಸಿ ಮದುವೆ ಮಾಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಆಂಧ್ರ ಪ್ರದೇಶದ ತಿರುಮಲದಲ್ಲಿ ಕರ್ನಾಟಕ ಛತ್ರಕ್ಕೆ ಸೇರಿದ ಸ್ಥಳಗಳಲ್ಲಿ ನೂತನ ವಸತಿ ಗೃಹ ನಿರ್ಮಾಣಕ್ಕೆ 200 ಕೋಟಿ ರೂ.ಮಂಜೂರಾತಿ ಬಗ್ಗೆ ಸಮಾಲೋಚನೆ ನಡೆಸಿದ್ದು, ಕೂಡಲೇ ಕಾಮಗಾರಿ ಆರಂಭಿಸಲು ಸಿಎಂ ಸೂಚನೆ ನೀಡಿದ್ದಾರೆ ಎಂದ ಅವರು, ಅನುಭವ ಮಂಟಪ ಸ್ಥಾಪನೆಗೆ 100 ಕೋಟಿ ರೂ.ಒದಗಿಸಲು ನಿರ್ಧರಿಸಲಾಯಿತು ಎಂದರು.

'ಕೇಂದ್ರ ಸರಕಾರದ ಸೂಚನೆಯಂತೆ ಕ್ರಮ'
ಕೋರೋನ ಲಾಕ್‍ಡೌನ್ ನಾಲ್ಕನೆ ಹಂತ ಮೇ 31ಕ್ಕೆ ಕೊನೆಗೊಳ್ಳಲಿದ್ದು, ಮಸೀದಿ, ದರ್ಗಾ, ಚರ್ಚ್‍ಗಳು ಸೇರಿದಂತೆ ಪ್ರಾರ್ಥನಾ ಸ್ಥಳಗಳನ್ನು ತೆರೆಯುವ ಸಂಬಂಧ ಕೇಂದ್ರ ಸರಕಾರದ ಗೃಹ ಇಲಾಖೆ ಹೊರಡಿಸುವ ಮಾರ್ಗಸೂಚಿ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು'
-ಎ.ಬಿ.ಇಬ್ರಾಹೀಂ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಜ್ ಮತ್ತು ವಕ್ಫ್ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News