ಆಹಾರ ಧಾನ್ಯದ ಕಿಟ್ ವಿತರಣೆ ವದಂತಿ: ಸಚಿವ ಸುರೇಶ್ ಅಂಗಡಿ ಕಚೇರಿಗೆ ಮುತ್ತಿಗೆ

Update: 2020-05-26 15:59 GMT

ಬೆಳಗಾವಿ, ಮೇ 26: ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಕಚೇರಿಯಲ್ಲಿ ಆಹಾರ ಧಾನ್ಯದ ಕಿಟ್ ವಿತರಿಸಲಾಗುತ್ತಿದೆ ಎಂಬ ವದಂತಿ ನಂಬಿ ನೂರಾರು ಮಹಿಳೆಯರು, ನೇಕಾರ ಸಮುದಾಯದವರು ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರು ಸುರಕ್ಷಿತ ಅಂತರವನ್ನೂ ಮರೆತು ಬೆಳಗಾವಿ ನಗರದ ಕಾಡಾ ಕಚೇರಿಯಲ್ಲಿ ಜಮಾಯಿಸಿದ್ದರು.

ಬೆಳಗಾವಿ ಜಿಲ್ಲೆಯ ಜನರು ಜಮಾಯಿಸಿದ್ದ ಸುದ್ದಿ ತಿಳಿದು ಕಚೇರಿಯಿಂದ ಹೊರ ಬಂದ ಸುರೇಶ್ ಅಂಗಡಿ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಪಡಿತರ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಅವುಗಳನ್ನು ಫಲಾನುಭವಿಗಳಿಗೆ ಒದಗಿಸಲು ಕ್ರಮ ವಹಿಸಲಾಗಿದೆ. ನಾನು ವೈಯಕ್ತಿಕವಾಗಿ ಆಹಾರ ಧಾನ್ಯ ಕಿಟ್ ವಿತರಿಸುತ್ತೇನೆ ಎಂದು ಎಲ್ಲಿಯೂ ತಿಳಿಸಿಲ್ಲ. ದಾನಿಗಳು ನೀಡಿದ್ದನ್ನು ಜನರಿಗೆ ಹಂಚಿದ್ದೇನೆ. ಆದರೆ, ನೀವೆಲ್ಲ ಇಲ್ಲಿಗೆ ಏಕೆ ಬಂದಿರಿ ಎಂದು ಅಚ್ಚರಿಯಿಂದ ಕೇಳಿದರು. 

ತಮಗೆ ಮುತ್ತಿಗೆ ಹಾಕಿದ ಜನರು ಏನಾದರೂ ಸಹಾಯ ಮಾಡಬೇಕು ಎಂದು ಪಟ್ಟು ಹಿಡಿದಿದ್ದರಿಂದ ಸಚಿವರು ಮುಜುಗರಕ್ಕೆ ಒಳಗಾಗದರು. ಸಚಿವ ಸುರೇಶ್ ಅಂಗಡಿ ಅವರು ಮಾತನಾಡಿ, ಪಡಿತರ ಚೀಟಿ ಇರುವವರಿಗೆ ಹಾಗೂ ಅರ್ಜಿ ಸಲ್ಲಿಸಿದವರಿಗೆ ಸರಕಾರ ನಿಗದಿಪಡಿಸಿದ ಆಹಾರಧಾನ್ಯ ವಿತರಿಸಬೇಕು ಎಂದು ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರಿಗೆ ನಿರ್ದೇಶನ ನೀಡಿದರು.

ರಾಜ್ಯ ಸರಕಾರದಿಂದ ನೆರವು ಕಲ್ಪಿಸಬೇಕೆಂದು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News