ಮನೆಬಾಗಿಲಿಗೆ ತಾಜಾ ತರಕಾರಿ ಪೂರೈಕೆಗೆ ಪೂರೈಕೆ

Update: 2020-05-26 16:14 GMT

ಬೆಂಗಳೂರು, ಮೇ 26: ರಾಜ್ಯಾದ್ಯಂತ ಕೊರೋನ ಅಟ್ಟಹಾಸ ಮೆರೆಯುತ್ತಿದೆ. ಸರಕಾರವು ಸೋಂಕು ನಿವಾರಣೆಯ ಸಲುವಾಗಿ ಲಾಕ್‍ಡೌನ್ ಘೋಷಣೆ ಮಾಡಿ, ಬಳಿಕ ಸಡಿಲಿಕೆ ನೀಡಲಾಗಿದೆಯಾದರೂ ಮಾರುಕಟ್ಟೆಗಳಿಂದ ಹಣ್ಣು ಮತ್ತು ತರಕಾರಿಗಳನ್ನು ಕೊಂಡುಕೊಳ್ಳಲಾಗದ ಜನರ ನೆರವಿಗೆ ಹೆಸರಘಟ್ಟದ ಭಾರತೀಯ ಸಂಶೋಧನಾ ಸಂಸ್ಥೆ ಧಾವಿಸಿದ್ದು, ಮನೆ ಮನೆಗಳ ಬಾಗಿಲಿಗೆ ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ತಲುಪಿಸುವ ಕೆಲಸಕ್ಕೆ ಮುಂದಾಗಿದೆ.

ಬೆಂಗಳೂರಿನ ಹಾಪ್‍ಕಾಮ್ಸ್ ಜತೆಗೂಡಿ ರಾಜ್ಯದ ವಿವಿಧೆಡೆ ಸಂಸ್ಥೆಯು ಅಭಿವೃದ್ಧಿಪಡಿಸಿದ ವಿದ್ಯುತ್ ಹಾಗೂ ಸೌರಶಕ್ತಿ ಚಾಲಿತ ವಾಹನಗಳಲ್ಲಿ ತಾಜಾ ಹಣ್ಣು ಹಾಗೂ ತರಕಾರಿಗಳನ್ನು ರಾಜ್ಯದ ವಿವಿಧ ಕಡೆಗಳಿಗೆ ಸಾಗಿಸಲಾಗುತ್ತಿದೆ. ಲಾಕ್‍ಡೌನ್‍ನಿಂದ ಗ್ರಾಹಕರಿಗೆ ಹಣ್ಣು ತರಕಾರಿ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಎಚ್ಚರ ವಹಿಸುವಂತೆ ಸರಕಾರ ಸೂಚಿಸಿದ ಬೆನ್ನಲ್ಲೇ ತೋಟಗಾರಿಕೆ ಇಲಾಖೆಯು ಹಾಪ್‍ಕಾಮ್ಸ್ ಜತೆಗೂಡಿ ರೈತರಿಂದ ಖರೀದಿಸಿದ ಉತ್ಪನ್ನಗಳನ್ನು ಸೌರ ವಿದ್ಯುತ್‍ಚಾಲಿತ ವಾಹನಗಳಲ್ಲಿ ಸಾಗಿಸಿ ಗ್ರಾಹಕರ ಬಳಿಗೆ ತಲುಪಿಸಲಾಗುತ್ತಿದೆ.
ಗ್ರಾಹಕರಿಗೆ ತಾಜಾ ಹಣ್ಣು ಮತ್ತು ತರಕಾರಿಗಳು ಲಭ್ಯವಾಗಲು ಈ ತಂತ್ರಜ್ಞಾನ ನೆರವು ನೀಡಲಿದೆ. ಸಂಸ್ಥೆಯ ತಂತ್ರಜ್ಞಾನ ಹಾಗೂ ಕೃಷಿ ಎಂಜಿನಿಯರಿಂಗ್ ವಿಭಾಗ ಅಭಿವೃದಧಿಪಡಿಸಿದ ಈ ಸೌರ ವಿದ್ಯುತ್‍ಚ್ಛಕ್ತಿ ಚಾಲಿತ ತರಕಾರಿ ಮಾರಾಟ ವಾಹನಗಳನ್ನು ತೋಟಗಾರಿಕೆ ಇಲಾಖೆಗೆ ನೀಡಲಾಗಿದೆ. 

ಸುಜಲಾ ಯೋಜನೆ ಅಡಿಯಲ್ಲಿ ಈ ವಾಹನ ಸೇವೆ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಜಿಲ್ಲೆಗಳಿಗೆ ವಿಸ್ತರಿಸಲು ಸಂಸ್ಥೆ ಮುಂದಾಗಿದೆ. ಈಗಾಗಲೇ ಮೈಸೂರು, ಬೆಂಗಳೂರು, ಗದಗ, ಬೀದರ್, ರಾಯಚೂರು, ಕೊಪ್ಪಳ, ಚಾಮರಾಜನಗರ, ದಾವಣಗೆರೆ, ಕಲಬುರಗಿ, ತುಮಕೂರು, ವಿಜಯಪುರ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳು ಈ ಸೇವೆಯನ್ನು ಉಪಯೋಗಿಸಿಕೊಂಡಿವೆ. ಕೋವಿಡ್ 19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಜನರಿಗೆ ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಪೂರೈಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಕೃಷಿ ಉತ್ಪನ್ನಗಳನ್ನು ತಾಜಾ ಸ್ಥಿತಿಯಲ್ಲಿಡಲು ವಾಹನದ ಮೇಲ್ಭಾಗದಲ್ಲಿ ಸೌರ ಪ್ಯಾನಲ್‍ಗಳನ್ನು ಅಳವಡಿಸಲಾಗಿದೆ. ಇದರ ಸಹಾಯದಿಂದ ಉಷ್ಣಾಂಶ ನಿಯಂತ್ರಿಸುವ ವ್ಯವಸ್ಥೆ ಮಾಡಲಾಗಿದೆ. ಹವಾಮಾನಕ್ಕೆ ತಕ್ಕಂತೆ ಉತ್ಪನ್ನಗಳಿಗೆ ಅಗತ್ಯವಿರುವ ತಾಜಾ ವಾತಾವರಣ ಕಲ್ಪಿಸಬಹುದು. ಹೆಚ್ಚುವರಿಯಾಗಿ ಸೌರ ಶಕ್ತಿಯನ್ನು ಬಳಸಿಕೊಳ್ಳಬಹುದು. ಪರ್ಯಾಯ ವಿದ್ಯುತ್ ಮೂಲಕವೂ ಈ ತಂತ್ರಜ್ಞಾನ ಕಾರ್ಯ ನಿರ್ವಹಿಸಬಲ್ಲದು ಎಂದು ಐಐಎಚ್‍ಆರ್‍ನ ವಿಜ್ಞಾನಿ ಜಿ.ಸೆಂಥಿಲ್ ಹೇಳಿದ್ದಾರೆ.

ಎಲ್‍ಇಡಿ ಪರದೆ ಬಳಕೆ
ಈ ವಾಹನದ ಹಿಂಭಾಗದಲ್ಲಿ ಸಾರ್ವಜನಿಕ ಪ್ರಕಟನೆ ಹಾಗೂ ಉತ್ಪನ್ನಗಳ ದರ ಪ್ರಕಟಿಸಲು ನೆರವಾಗುವಂತೆ ಎಲ್‍ಇಡಿ ಪರದೆ ಅಳವಡಿಸಲಾಗಿದೆ. ಅದರಲ್ಲಿ ಧ್ವನಿವರ್ಧಕ, ವಿದ್ಯುತ್‍ಚ್ಚಾಲಿತ ತೂಕದ ಯಂತ್ರ, ಡಿಜಿಟಲ್ ಬಿಲ್ಲಿಂಗ್ ಹಾಗೂ ಜಿಪಿಎಸ್ ವ್ಯವಸ್ಥೆಯೂ ಇದೆ. 600 ವ್ಯಾಟ್ ಸಾಮಥ್ರ್ಯದ ಸೌರಶಕ್ತಿಯಿಂದ ಇದೆಲ್ಲಾ ಕಾರ್ಯನಿರ್ವಹಿಸುತ್ತದೆ. ಕನಿಷ್ಠ ಎರಡು ದಿನಗಳ ಕಾಲ ಉತ್ಪನ್ನಗಳು ತಾಜಾತನದಿಂದ ಕೂಡಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News