ಕೋವಿಡ್-19: ಹೊರ ಜಿಲ್ಲೆಗಳಿಂದ ಆಗಮಿಸುವ ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ಪರೀಕ್ಷೆ

Update: 2020-05-26 17:04 GMT

ಬೆಂಗಳೂರು, ಮೇ 26: ಕೆಎಸ್ಸಾರ್ಟಿಸಿ ಬಸ್ ಚಾಲಕರೊಬ್ಬರಿಗೆ ಕೋವಿಡ್-19 ವೈರಸ್ ಸೋಂಕು ದೃಢಪಟ್ಟ ಬೆನ್ನಲ್ಲೇ ಎಚ್ಚೆತ್ತ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಯನ್ನು ಪರೀಕ್ಷೆಗೊಳಪಡಿಸಲು ಮುಂದಾಗಿದೆ.

ಈ ಸಂಬಂಧ ಕೆಎಸ್ಸಾರ್ಟಿಸಿ ನಿಗಮದ ವ್ಯಾಪ್ತಿಯ ಎಲ್ಲ ವಿಭಾಗೀಯ ನಿಯಂತ್ರಕರಿಗೆ ಸೂಚನೆ ನೀಡಲಾಗಿದೆ. ಅದರಲ್ಲಿಯೂ ಕೆಂಪು ವಲಯ ಪ್ರದೇಶದಿಂದ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಯನ್ನು ಕಡ್ಡಾಯವಾಗಿ ಪರೀಕ್ಷೆ ನಡೆಸಲಾಗುತ್ತಿದೆ.

ಹೊರ ಜಿಲ್ಲೆಗಳಿಂದ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯವಾದಷ್ಟು ಹೆಚ್ಚು ಸಿಬ್ಬಂದಿಯ ಗಂಟಲು ದ್ರವ ಸಂಗ್ರಹಿಸಿ ಸೋಂಕು ಪರೀಕ್ಷೆಗೊಳಪಡಿಸುವಂತೆ ಡಿಎಚ್‍ಒಗಳಿಗೆ ಮನವಿ ಮಾಡು ವಂತೆ ನಿರ್ದೇಶಿಸಲಾಗಿದೆ. ನಿಗಮದಲ್ಲಿ  ಕಾರ್ಯನಿರ್ವಹಿಸುವ 30 ಸಾವಿರಕ್ಕೂ ಅಸಿಬ್ಬಂದಿ ಪೈಕಿ ಅರ್ಧಕ್ಕರ್ಧ ಹೊರಗಿನ ಜಿಲ್ಲೆರಾಗಿದ್ದು, ಪರೀಕ್ಷೆ ಸವಾಲಾಗಿ ಪರಿಣಮಿಸಿದೆ.

ಆರೋಗ್ಯ ಇಲಾಖೆಗೆ ಸವಾಲು: ಸೋಂಕು ಪರೀಕ್ಷಾ ಕಿಟ್‍ಗಳು ಸಾಕಷ್ಟಿಲ್ಲ ಹಾಗೂ ಆರೋಗ್ಯ ಸಿಬ್ಬಂದಿ ಕೊರತೆಯೂ ಇದೆ. ಇದೇ ಕಾರಣಕ್ಕೆ ಮನೆ ಮನೆಗೆಗೆ ತೆರಳಿ ಗಂಟಲು ದ್ರವ ದರಿ ಸಂಗ್ರಹಿಸಬೇಕು ಎಂಬ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ(ಐಸಿಎಂಆರ್) ಸಲಹೆಯನ್ನು ಕೈಬಿಡಲಾಗಿದೆ. 

ಇನ್ನು ಎಲ್ಲೆಡೆ ರ್ಯಾಂಡಮ್ ಪರೀಕ್ಷೆಗಳು ನಡೆಯುತ್ತಿದ್ದು, ಜತೆಗೆ ಸುಮಾರು 1.15 ಲಕ್ಷ ವಲಸೆ ಕಾರ್ಮಿಕರು ರಾಜ್ಯದಲ್ಲಿದ್ದು, ಸಾರಿಗೆ ಸಿಬ್ಬಂದಿಯ ಗಂಟಲು ದ್ರವ ಮಾದರಿ ಸಂಗ್ರಹ ಆರೋಗ್ಯ ಇಲಾಖೆಗೆ ಸವಾಲಾಗಿದೆ. ಇದೇ ಕಾರಣಕ್ಕೆ ನಿಗಮದ ವಿಭಾಗೀಯ ನಿಯಂತ್ರಕರು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಮಾಡಿದರೂ ನೀರಸ ಪ್ರತಿಕ್ರಿಯೆ ಬರುತ್ತಿದೆ.

ಹಾಜರಿಗೆ 3 ದಿನ ವೇಟಿಂಗ್!: ತುಮಕೂರಿನಿಂದ ಆಗಮಿಸಿದ ಚಾಲಕರೊಬ್ಬರಿಗೆ ಸೋಂಕು ದೃಢಪಟ್ಟ ಬೆನ್ನಲ್ಲೇ ಕೆಎಸ್ಸಾರ್ಟಿಸಿ ವ್ಯಾಪ್ತಿಯ ವಿಭಾಗೀಯ ನಿಯಂತ್ರಕರು, ಹೊರ ಜಿಲ್ಲೆಗಳಿಂದ ಕರ್ತವ್ಯಕ್ಕೆ ಹಾಜರಾಗಲು ಬರುವವರನ್ನು ಮೂರು ದಿನಗಳ ನಂತರ ಬರುವಂತೆ ಹೇಳಿ ಕಳುಹಿಸುತ್ತಿದ್ದಾರೆ! ರವಿವಾರ ಸೋಂಕು ದೃಢಪಟ್ಟ ವ್ಯಕ್ತಿಯು ಕರ್ತವ್ಯಕ್ಕೆ ಹಾಜರಾಗುವ ಮುನ್ನ ವಾಸವಿದ್ದ ತುಮಕೂರು ಹಾಗೂ ಕೆಲಸ ಮಾಡುತ್ತಿರುವ ಮಾಗಡಿ ತಾಲೂಕು ಆರೋಗ್ಯಾಧಿಕಾರಿಯಿಂದ ವೈದ್ಯಕೀಯ ಪ್ರಮಾಣಪತ್ರ ಹಾಜರುಪಡಿಸಿದ್ದರು. ಆದರೂ ಸೋಂಕು ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಯನ್ನು ಮೂರು ದಿನಗಳ ‘ವೇಟಿಂಗ್’ನಲ್ಲಿ ಇಡಲಾಗುತ್ತಿದೆ. ಒಂದು ವೇಳೆ ಪಾಸಿಟಿವ್ ಬಂದಿದ್ದರೆ, ಆರೋಗ್ಯ ಇಲಾಖೆ ಸಿಬ್ಬಂದಿಯೇ ಸೋಂಕಿತ ವ್ಯಕ್ತಿಯನ್ನು ಕರೆದೊಯ್ದು ಕ್ವಾರಂಟೈನ್ ಮಾಡುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ವಿಭಾಗೀಯ ನಿಯಂತ್ರಕರೊಬ್ಬರು ಹೇಳಿದ್ದಾರೆ.

ಕೆಂಪು ವಲಯದಿಂದ ಬಂದು ಕರ್ತವ್ಯಕ್ಕೆ ಹಾಜರಾಗುವವರಿಗೆ ಆ ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ತಪಾಸಣೆಗೊಳಪಡುವಂತೆ ಸೂಚಿಸಲಾಗಿದೆ. ಆದ್ಯತೆ ಮೇರೆಗೆ ಈ ಸಿಬ್ಬಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆಗೊಳಪಡಿಸುವಂತೆ ಆಯಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡುವಂತೆ ವಿಭಾಗೀಯ ನಿಯಂತ್ರಕರಿಗೂ ಸೂಚಿಸಲಾಗಿದೆ. ನಿಗಮವು ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News