ಭಾರೀ ಸಿರಿವಂತರ ಸಂಪತ್ತಿನ ಮೇಲೆ ತೆರಿಗೆ ಹಾಕಲಿ

Update: 2020-05-27 06:08 GMT

ಕೊರೋನ ಬರುವುದಕ್ಕಿಂತ ಮೊದಲೇ ಹಳ್ಳ ಹಿಡಿದಿದ್ದ ದೇಶದ ಆರ್ಥಿಕತೆ ಈಗ ಪ್ರಪಾತದ ಅಂಚಿಗೆ ಬಂದು ನಿಂತಿದೆ. ಹೀಗಾಗಿ ಸೋಂಕು ಹರಡಿದರೆ ಹರಡಲಿ ಎಂದು ‘ಲಾಕ್‌ಡೌನ್’ ಸಡಿಲುಗೊಳಿಸಿದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜೂನ್ 1ನೇ ತಾರೀಕಿನಿಂದ ದಿಗ್ಬಂಧನವನ್ನು ಬಹುತೇಕ ಪೂರ್ತಿ ತೆಗೆದು ಹಾಕುವ ವದಂತಿ ದೇಶದಲ್ಲಿ ದಟ್ಟವಾಗಿ ಹರಡಿದೆ. ಆರ್ಥಿಕ ಪುನಶ್ಚೇತನಕ್ಕೆ ಸರಕಾರದ ಬಳಿ ಯಾವುದೇ ಪರಿಣಾಮಕಾರಿ ಪರ್ಯಾಯ ಗೋಚರಿಸುತ್ತಿಲ್ಲ. ಹೀಗಾಗಿ ಆರ್ಥಿಕ ಪರಿಸ್ಥಿತಿ ಮತ್ತೆ ಮೇಲೇಳಲಾಗದಷ್ಟು ಕುಸಿತಕ್ಕೆ ಒಳಗಾಗುತ್ತಿದೆ. ಬ್ಯಾಂಕಿಂಗ್ ವಲಯ, ಮ್ಯೂಚುವಲ್ ಫಂಡ್, ರಿಯಲ್ ಎಸ್ಟೇಟ್ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಸರಕಾರದ ನೆರವಿಗೆ ಬಾಯಿ ತೆರೆದು ನಿಂತಿವೆ.ಇವುಗಳಿಗಿಂತ ಘೋರವಾಗಿರುವುದು ದುಡಿಯುವ ವರ್ಗದ ಪರಿಸ್ಥಿತಿ ಅಂದರೆ ಅತಿಶಯೋಕ್ತಿಯಲ್ಲ.

ದೇಶದಲ್ಲಿ ದಿಗ್ಬಂಧನ ಹೇರಿದ ನಂತರ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡವು. ನಿಂತು ಹೋದ ಸಣ್ಣ, ದೊಡ್ಡ ಉದ್ಯಮಗಳ ಪುನಶ್ಚೇತನ ಸುಲಭದ ಸಂಗತಿಯಲ್ಲ. ಆರ್ಥಿಕ ಪುನರುಜ್ಜೀವನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಬರೀ ಅಂಕಿ ಸಂಖ್ಯೆಗಳ ಕಸರತ್ತಲ್ಲದೆ ಬೇರೇನೂ ಅಲ್ಲ.

ತಮ್ಮ ರಕ್ತವನ್ನು ನೀರು ಮಾಡಿಕೊಂಡು ಈ ದೇಶವನ್ನು ಕಟ್ಟಿದ ಸುಮಾರು 18 ಕೋಟಿ ವಲಸೆ ಕಾರ್ಮಿಕರ ಬದುಕು ನೀರು ಪಾಲಾಗಿದೆ. 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಅವರಿಗೆ ಎರಡು ತಿಂಗಳ ರೇಷನ್ ಬಿಟ್ಟರೆ ಬೇರೇನೂ ಇಲ್ಲ. ಕನಿಷ್ಠ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲಾಗದ ಸರಕಾರ ಅವರು ಕಾಲ್ನಡಿಗೆಯಲ್ಲಿ ಹೊರಟು ಊರು ಸಮೀಪಿಸುತ್ತಿರುವಾಗ ‘ಶ್ರಮಿಕ್ ರೈಲು’ ಬಿಟ್ಟಿತು. ಇನ್ನೊಂದೆಡೆ ಕೈಗಾರಿಕಾ ಕಾರ್ಮಿಕರು ಎರಡು ತಿಂಗಳಿಂದ ಉದ್ಯೋಗವಿಲ್ಲದೆ ಅಲೆಯುತ್ತಿದ್ದಾರೆ. ಈಗ ಅವರ ದುಡಿಮೆಯ ಅವಧಿಯನ್ನು 8 ತಾಸಿನಿಂದ 12 ತಾಸಿಗೆ ಜಾಸ್ತಿ ಮಾಡಿ ಉರಿಯುವ ಗಾಯಕ್ಕೆ ಉಪ್ಪು ಸವರಿದೆ.

ದೇಶ ತೀವ್ರ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ಈ ಸನ್ನಿವೇಶದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ತಲೆ ಎತ್ತಿ ನಿಲ್ಲಬೇಕಾದರೆ ಈವರೆಗೆ ಈ ನೆಲದಿಂದ ಸಾಕಷ್ಟನ್ನು ಪಡೆದುಕೊಂಡು ಸಂಪತ್ತಿನ ಉಪ್ಪರಿಗೆಯೇರಿ ಕುಳಿತಿರುವ ಶೇ.1ರಷ್ಟಿರುವ ಭಾರೀ ಸಿರಿವಂತರು ದೇಶಕ್ಕಾಗಿ ತಮ್ಮ ಸಂಪತ್ತಿನ ಪ್ರಮಾಣಕ್ಕೆ ಅನುಗುಣವಾಗಿ ಒಂದಿಷ್ಟು ತ್ಯಾಗಕ್ಕೆ ಮುಂದಾಗಬೇಕು. ದೇಶದ ದುಡಿಯುವ ಜನ ತಾವು ಪಡೆಯುವ ಅತ್ಯಂತ ಕಡಿಮೆ ಕೂಲಿಗೆ ಪ್ರತಿಯಾಗಿ ಲಕ್ಷಾಂತರ ಕೋಟಿ ರೂ. ಸಂಪತ್ತನ್ನು ದೇಶಕ್ಕೆ ನೀಡಿ ಬೀದಿಗೆ ಬಿದ್ದಿದ್ದಾರೆ .ಅವರ ಬಳಿ ಕೊಡಲು ಇನ್ನೇನೂ ಉಳಿದಿಲ್ಲ. ಈಗ ಸಿರಿವಂತರ ಸರದಿ. ದೇಶಕ್ಕೆ ಸ್ವಾತಂತ್ರ ಬಂದ ಹೊಸದರಲ್ಲಿ ಕಲ್ಯಾಣ ರಾಜ್ಯದ ಪರಿಕಲ್ಪನೆ ಕುಡಿಯೊಡೆದಾಗ ಭಾರೀ ಸಿರಿವಂತರ ಸಂಪತ್ತಿನ ಮೇಲೆ ತೆರಿಗೆ ವಿಧಿಸುವ ಪದ್ಧತಿ ಇತ್ತು. ಆದರೆ ಮಾರುಕಟ್ಟೆ ಆರ್ಥಿಕತೆಯ ಪ್ರಭಾವ ಹೆಚ್ಚಾದ ಕಾರಣ 2015ರಲ್ಲಿ ಕೇಂದ್ರ ಸರಕಾರ ಸಂಪತ್ತಿನ ಮೇಲೆ ತೆರಿಗೆ ವಿಧಿಸುವ ಪರಿಕಲ್ಪನೆಯನ್ನು ಕೈ ಬಿಟ್ಟಿತು.

ಹೀಗಾಗಿ ಭಾರತದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಲೇ ಹೋಯಿತು. ಶೇ.1ರಷ್ಟಿರುವ ಜನರ ಬಳಿ ದೇಶದ ಮುಕ್ಕಾಲು ಭಾಗ ಸಂಪತ್ತು ಕೇಂದ್ರೀಕರಣಗೊಂಡಿತು.ಅಭಿವೃದ್ಧಿ ಆರ್ಥಿಕತೆಯ ಹೆಸರಿನಲ್ಲಿ ಸಿರಿವಂತರು ಭಾರೀ ಸಿರಿವಂತರಾಗುತ್ತಾ ನಡೆದರು. ಈ ಅಸಮಾನತೆಯ ಪ್ರಶ್ನೆಯ ಬಗ್ಗೆ ಜನ ಮಾತಾಡಲೇ ಬಾರದೆಂದು ಅವರನ್ನು ಕೋಮು ದ್ವೇಷದ ರಾಜಕಾರಣದಲ್ಲಿ ಮುಳುಗಿಸಲಾಯಿತು. ಆದರೆ ಕೊರೋನ ಹೊಡೆತಕ್ಕೆ ಈಗ ದೇಶವೇ ತತ್ತರಿಸಿ ಹೋಗಿದೆ. ಭಾರತದ ಆರ್ಥಿಕ ಅಸ್ತಿತ್ವಕ್ಕೆ ಗಂಡಾಂತರ ಬಂದಿದೆ. ಈ ವಿಪತ್ತಿನಿಂದ ಪಾರಾಗಲು ಶೇ.1ರಷ್ಟಿರುವ ಸಿರಿವಂತರ ಮೇಲೆ ಶೇ.2ರಷ್ಟು ತೆರಿಗೆ ವಿಧಿಸಬೇಕೆಂದು ದೇಶದ ಹೆಸರಾಂತ ಚಿಂತಕರು, ಲೇಖಕರು ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಮನವಿಯ ಬಗ್ಗೆ ಸರಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ವಿಪ್ರೊ ಸಂಸ್ಥೆಯ ಅಜೀಮ್ ಪ್ರೇಮ್‌ಜಿ ಅವರು ಈಗಾಗಲೇ ತಮ್ಮ ಒಟ್ಟು ಸಂಪತ್ತಿನ ಶೇ.2ರಷ್ಟನ್ನು ಕೊರೋನ ಬಿಕ್ಕಟ್ಟಿನ ನಿವಾರಣೆಗಾಗಿ ಬಿಟ್ಟು ಕೊಟ್ಟಿದ್ದಾರೆ. ಉಳಿದ ಕಾರ್ಪೊರೇಟ್ ಉದ್ಯಮಪತಿಗಳು ದೇಶಕ್ಕಾಗಿ ತಮ್ಮ ಸಂಪತ್ತಿನಲ್ಲಿ ಶೇ.2ರಷ್ಟನ್ನು ತೆರಿಗೆ ರೂಪದಲ್ಲಿ ಸರಕಾರಕ್ಕೆ ನೀಡಲಿ. ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿ. ಬಿಜೆಪಿ ಸರಕಾರಕ್ಕೆ ಮತ್ತು ಅದರ ಸೈದ್ಧಾಂತಿಕ ಗುರು ಆರೆಸ್ಸೆಸ್‌ಗೆ ಗುರುದಕ್ಷಿಣೆ ನೀಡುವ ಕಾರ್ಪೊರೇಟ್ ಧಣಿಗಳ ಬಗ್ಗೆ ವಿಶೇಷ ಪ್ರೀತಿ. ಆದರೆ ಆ ಪ್ರೀತಿಗಿಂತ ದೇಶ ದೊಡ್ಡದು. ಸರಕಾರ ಮುಲಾಜಿಲ್ಲದೆ ಶೇ.1ರಷ್ಟಿರುವ ಭಾರೀ ಸಿರಿವಂತರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲಿ. ದೇಶವನ್ನು ಕೊರೋನ ನಂತರದ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News