ಕೊರೋನ ನಿಯಂತ್ರಣದ ನಂತರ ಪಡಿತರ ಚೀಟಿ ವಿತರಣೆ: ಸಚಿವ ಕೆ. ಗೋಪಾಲಯ್ಯ

Update: 2020-05-26 17:34 GMT

ಬೆಂಗಳೂರು, ಮೇ 26: ರಾಜ್ಯದಲ್ಲಿ ಕೊರೋನ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದ ನಂತರ ಹೊಸದಾಗಿ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

ಮಂಗಳವಾರ ಮಹಾಲಕ್ಷ್ಮಿ ಬಡಾವಣೆಯಲ್ಲಿನ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪಡಿತರ ವಿತರಣೆ ವ್ಯವಸ್ಥೆಯನ್ನು ಪರಿಶೀಲನೆ ಮಾಡಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಲವು ತಾಂತ್ರಿಕ ಕಾರಣ ಹಾಗೂ ಕೊರೋನ ಸಾಂಕ್ರಾಮಿಕ ರೋಗ ಆವರಿಸಿದ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಮಾಡುವುದು ವಿಳಂಬವಾಗಿತ್ತು. ಇದೀಗ ಕೊರೋನ ನಿಯಂತ್ರಣಕ್ಕೆ ಬಂದ ತಕ್ಷಣವೇ ಯಾರಿಗೆ ಪಡಿತರ ಚೀಟಿ ಇಲ್ಲವೂ ಅವರನ್ನು ಗುರುತಿಸಿ ನೀಡಲಾಗುವುದು ಎಂದು ಹೇಳಿದರು.

ಪಡಿತರ ಚೀಟಿ ಇಲ್ಲದವರಿಗೂ ಆಹಾರ ಧಾನಗಳನ್ನು ವಿತರಣೆ ಮಾಡಲಾಗುತ್ತಿದೆ. ಪಡಿತರ ಚೀಟಿ ಇಲ್ಲದವರು ಹಸಿವಿನಿಂದ ಬಳಲಬಾರದೆಂಬ ಕಾರಣಕ್ಕಾಗಿ ಹೊರ ರಾಜ್ಯದವರೇ ಇರಲಿ, ಇಲ್ಲವೇ ಇತರೆ ಯಾವುದೇ ಜಿಲ್ಲೆಯವರಾಗಲಿ ಅಂತಹವರು ತಮ್ಮ ಆಧಾರ್ ಕಾರ್ಡ್‍ಗಳನ್ನು ತೋರಿಸಿ ಪಡಿತರ ಧಾನ್ಯ ಪಡೆಯಬಹುದಾಗಿದೆ. ಯಾರೊಬ್ಬರಿಗೂ ಪಡಿತರ ಚೀಟಿ ಇಲ್ಲ ಎಂಬ ಕಾರಣಕ್ಕಾಗಿ ಆಹಾರ ಧಾನ್ಯಗಳನ್ನು ಫಲಾನುಭವಿಗಳಿಗೆ ತಡೆಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಮೇ 31ರವರೆಗೆ 5 ಕೆಜಿ ಅಕ್ಕಿ ಹಾಗೂ ಒಂದು ಕೆಜಿ ಕಡಲೆಕಾಳು ವಿತರಣೆ ಮಾಡಲಾಗುವುದು. ಜೂನ್ 1ರಿಂದ 5 ಕೆಜಿ ಅಕ್ಕಿ 2 ಕೆಜಿ ಕಡಲೆಕಾಳನ್ನು ವಿತರಣೆ ಮಾಡಲಿದ್ದೇವೆ ಎಂದರು.

ಪಡಿತರ ವ್ಯವಸ್ಥೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಬುಧವಾರದಿಂದ ನಾನೇ ಖುದ್ದಾಗಿ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಹಾಗೆಯೇ ಇತರೆ ಕಡೆಗಳಲ್ಲಿ ಅಧಿಕಾರಿಗಳು ಕೂಡಾ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪಡಿತರ ಚೀಟಿ ಇಲ್ಲದೇ ಇದ್ದರೂ ಪಡಿತರ ವಿತರಣೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ಪಡಿತರ ಚೀಟಿ ಇಲ್ಲ ಎಂದು ಆಹಾರ ಧಾನ್ಯಗಳನ್ನು ವಿತರಣೆ ಮಾಡದೇ ಇದ್ದಲ್ಲಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಈಗಾಗಲೇ ಕೇಂದ್ರ ಸರಕಾರ ಅಕ್ಕಿ ಮತ್ತು ಕಡಲೆಕಾಳನ್ನು ಬಿಡುಗಡೆ ಮಾಡಿದೆ. ರಾಜ್ಯ ಸರಕಾರದ ವತಿಯಿಂದಲೂ ವಿತರಣೆ ಮಾಡುತ್ತಿದ್ದೇವೆ. ನೀವು ಎಲ್ಲೇ ಇದ್ದರೂ ಮೊದಲು ಪಡಿತರ ಧಾನ್ಯವನ್ನು ಖರೀದಿ ಮಾಡಬೇಕು. ಹಸಿವಿನಿಂದ ಯಾರೊಬ್ಬರೂ ಬಳಲಬಾರದೆಂಬುದೇ ನಮ್ಮ ಸರಕಾರದ ಉದ್ದೇಶವಾಗಿದೆ. ಕಾರ್ಮಿಕ ಇಲಾಖೆ ವತಿಯಿಂದಲೂ ವಲಸೆ ಮತ್ತು ಕಾರ್ಮಿಕರಿಗೆ ಪಡಿತರ ಧಾನ್ಯ ವಿತರಣೆ ಮಾಡಿದ್ದೇವೆ. ಸಣ್ಣಪುಟ್ಟ ಗೊಂದಲಗಳಿದ್ದರೂ ಕಟ್ಟಕಡೆಯ ಮನುಷ್ಯನಿಗೂ ಪಡಿತರ ಧಾನ್ಯ ಸಿಗಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News