ಕೊರೋನ ಸಂಕಷ್ಟ ಬಡವರ ಪರವಾಗಿ ನಿಲ್ಲುವಲ್ಲಿ ಬಿಜೆಪಿ ಸರಕಾರ ವಿಫಲ: ಡಿ.ಕೆ.ಶಿವಕುಮಾರ್

Update: 2020-05-26 18:00 GMT

ಬೆಂಗಳೂರು, ಮೇ 26: ಇಡೀ ಜಗತ್ತನ್ನೆ ಕಾಡುತ್ತಿರುವ ಕೊರೋನ ಪಿಡುಗು ಕರ್ನಾಟಕವನ್ನು ಬಿಟ್ಟಿಲ್ಲ. ಇಂತಹ ನಿರ್ಣಾಯಕ ಸಂದರ್ಭದಲ್ಲಿ ರೈತರು, ಕಾರ್ಮಿಕರು, ವಲಸಿಗರು, ಬಡವರ ಪರವಾಗಿ ನಿಲ್ಲುವಲ್ಲಿ ರಾಜ್ಯ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಅದು ನಾಡಿನ ಜನತೆಯ ಸಂಕಷ್ಟದ ಧ್ವನಿ ಆಲಿಸದ ಕಣ್ಣು, ಕಿವಿ, ಹೃದಯ ಇಲ್ಲದ ಸರಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶ, ಸಮಾಜ ಕಟ್ಟಲು ಶ್ರಮಿಸಿದ ಈ ವೃತ್ತಿಪರ ಕೆಲಸಗಾರರಿಗೆ ರಾಜ್ಯ ಸರಕಾರದಿಂದ ದೊಡ್ಡ ಅನ್ಯಾಯವಾಗಿದೆ. ಹಳ್ಳಿಯಲ್ಲಿರುವವರು ಆ್ಯಪ್‍ನಲ್ಲಿ, ಇಂಗ್ಲಿಷ್‍ನಲ್ಲೆ ತಮ್ಮ ವಿವರಗಳನ್ನು ಅಪ್‍ಲೋಡ್ ಮಾಡಲು ಸಾಧ್ಯವೆ? ಎಂದು ಪ್ರಶ್ನಿಸಿದರು.

ಅಧಿಕಾರಿಗಳನ್ನೆ ಜನರ ಬಳಿ ಕಳುಹಿಸಿ ನೇರವಾಗಿ ವಿವರ ಪಡೆದು ಹಣಕಾಸಿನ ನೆರವು ನೀಡಲು ಸರಕಾರಕ್ಕೆ ಏನು ಸಮಸ್ಯೆ? ರಾಜ್ಯ ಸರಕಾರ ವೃತ್ತಿಪರ ಅಸಂಘಟಿತ ಕಾರ್ಮಿಕರಲ್ಲಿ ಕೆಲವರನ್ನು ಮಾತ್ರವೆ ಆಯ್ಕೆ ಮಾಡಿ ತಿಂಗಳಿಗೆ 5 ಸಾವಿರ ರೂ.ಕೊಡುವುದಾಗಿ ಹೇಳಿದ್ದರೂ ಇಲ್ಲಿಯವರೆಗೆ ಯಾರೊಬ್ಬರಿಗೂ ಹಣ ಬಂದಿಲ್ಲ ಎಂದು ಅವರು ಆರೋಪಿಸಿದರು.

ಹಣ ಕೊಡಲು ಹಾಕಿರುವ ಅನೇಕ ಷರತ್ತುಗಳು, ಅಧಿಕಾರಿಗಳ ಕಮಿಷನ್ ಬೇಡಿಕೆ ಸೇರಿದಂತೆ ಹಲವು ತೊಂದರೆಗಳಿಂದಾಗಿ ಓರ್ವ ಕಾರ್ಮಿಕನಿಗೂ ಹಣ ತಲುಪಿಲ್ಲ. ಸಂಕಷ್ಟದಲ್ಲಿರುವ ಸವಿತಾ ಸಮಾಜ, ಕೃಷಿ ಕಾರ್ಮಿಕರು, ಕಮ್ಮಾರರು, ಹಮಾಲಿಗಳು, ಚಮ್ಮಾರರು, ಕುಂಬಾರರು, ಮೀನುಗಾರರು, ಬೀಡಿ ಕಟ್ಟುವವರು, ಬೀದಿಬದಿ ವ್ಯಾಪಾರಿಗಳು, ಆಟೊ, ಟ್ಯಾಕ್ಸಿ ಚಾಲಕರು ಸೇರಿದಂತೆ ಅನೇಕ ವೃತ್ತಿಪರ ಅಸಂಘಟಿತ ಕಾರ್ಮಿಕರಿಗೆ ತಿಂಗಳಿಗೆ 10 ಸಾವಿರ ರೂ.ಪರಿಹಾರ ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವಿ ಮಾಡಿದ್ದೆವು ಎಂದು ಶಿವಕುಮಾರ್ ತಿಳಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News