ರಾಜ್ಯಕ್ಕೆ ಕೊರೋನಾಘಾತ: ಒಂದೇ ದಿನ 135 ಮಂದಿಗೆ ಸೋಂಕು ದೃಢ, ಮೂವರು ಸಾವು

Update: 2020-05-27 14:32 GMT

ಬೆಂಗಳೂರು, ಮೇ 27: ಕರ್ನಾಟಕದಲ್ಲಿ ಒಂದೇ ದಿನ ಮತ್ತೆ 135 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 2,418ಕ್ಕೆ ಏರಿಕೆಯಾಗಿದೆ. ಯಾದಗಿರಿ, ಬೀದರ್ ಮತ್ತು ವಿಜಯಪುರ ಜಿಲ್ಲೆಯಲ್ಲಿ ಕೊರೋನದಿಂದ ತಲಾ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 47ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಮಂಗಳವಾರ ಸಂಜೆ 5 ಗಂಟೆಯಿಂದ ಬುಧವಾರ ಸಂಜೆ 5 ಗಂಟೆವರೆಗೆ 135 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.

ಯಾದಗಿರಿ ಜಿಲ್ಲೆಯ 69 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇವರ ಕೊರೋನ ವರದಿಯು ಪಾಸಿಟಿವ್ ಬಂದಿದೆ. ಬೀದರ್ ಜಿಲ್ಲೆಯ 49 ವರ್ಷದ ಪುರುಷರೊಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಮೇ.19 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಇಂದು ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆಯ 82 ವರ್ಷದ ಪುರುಷರೊಬ್ಬರು ತೀವ್ರ ಉಸಿರಾಟದ ತೊಂದರೆ, ಜ್ವರ ಹಾಗೂ ಕೆಮ್ಮಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಮೇ.26 ರಂದು ಸಾವನ್ನಪ್ಪಿದ್ದಾರೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಕಲಬುರಗಿ 28, ಯಾದಗಿರಿ 16, ಬೀದರ್ 13, ಹಾಸನ 15, ದಕ್ಷಿಣ ಕನ್ನಡ 11, ಉಡುಪಿ 9, ಬೆಂಗಳೂರು ನಗರ, ಉತ್ತರ ಕನ್ನಡ ಹಾಗೂ ದಾವಣಗೆರೆಯಲ್ಲಿ ತಲಾ 6, ರಾಯಚೂರು 5, ಬೆಳಗಾವಿ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ 4, ವಿಜಯಪುರ ಮತ್ತು ಚಿಕ್ಕಮಗಳೂರಿನಲ್ಲಿ ತಲಾ 3, ಬೆಂಗಳೂರು ಗ್ರಾಮೀಣ 2 ಹಾಗೂ ಮಂಡ್ಯ, ಬಳ್ಳಾರಿ, ಕೋಲಾರ ಮತ್ತು ತುಮಕೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ಪಾಸಿಟಿವ್ ಬಂದಿದೆ.

ಒಟ್ಟಾರೆ ರಾಜ್ಯದಲ್ಲಿ 2,418 ಕೊರೋನ ಸೋಂಕಿತರ ಪೈಕಿ 781 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 17 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 47 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 1588 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಕೊರೋನ ಪರೀಕ್ಷೆಗೆ 60 ಲ್ಯಾಬ್‍ಗೆ ಅನುಮತಿ: ಕೊರೋನ ರಾಜ್ಯಕ್ಕೆ ಎಂಟ್ರಿ ಕೊಟ್ಟಾಗ ಮೊದಮೊದಲು ಸ್ಯಾಂಪಲ್‍ಗಳನ್ನ ಪುಣೆಗೆ ಕಳುಹಿಸಲಾಗುತ್ತಿತ್ತು. ಆದರೆ ಅಲ್ಲಿಂದ ತಡವಾಗಿ ಬರುತ್ತಿದ್ದ ಕಾರಣದಿಂದಾಗಿ ಫೆ.1 ರಂದು ಮೊದಲ ಲ್ಯಾಬ್ ಬೆಂಗಳೂರಿನಲ್ಲಿ ಶುರು ಮಾಡಲಾಯಿತು. ಅನಂತರ ಫೆಬ್ರವರಿ ಕೊನೆಗೆ 2 ಲ್ಯಾಬ್, ಮಾರ್ಚ್ ಕೊನೆಗೆ 6 ಲ್ಯಾಬ್, ಎಪ್ರಿಲ್ ಕೊನೆಗೆ 16 ಲ್ಯಾಬ್ ಮಾಡಲಾಯಿತು. ಮೇ ತಿಂಗಳ ಕೊನೆಗೆ 60 ಲ್ಯಾಬ್‍ಗಳನ್ನು ಮಾಡುತ್ತೇವೆ ಎಂದು ಸರಕಾರ ಹೇಳಿದ್ದು, ಇದೀಗ 60 ಲ್ಯಾಬ್‍ಗಳಿಗೆ ಅನುಮತಿ ಸಿಕ್ಕಿದೆ.

ಹೊಟೇಲ್‍ಗಳಲ್ಲಿ ಕ್ವಾರಂಟೈನ್ ಆದವರು ಎಷ್ಟು?: ಅಂತರ್ ರಾಷ್ಟ್ರೀಯ-ಅಂತರ್ ರಾಜ್ಯದಿಂದ ಬಂದ ಪ್ರಯಾಣಿಕರನ್ನ ಕ್ವಾರಂಟೈನ್ ಮಾಡಲಾಗಿದ್ದು, ಅವರಿಗೆ ಅನುಕೂಲವಾಗುವಂತೆ ಅವರಿಷ್ಟದ ಹೊಟೇಲ್ ಬುಕ್ ಮಾಡಿಕೊಳ್ಳಲು ಇಲಾಖೆ ಅವಕಾಶ ಮಾಡಿಕೊಡಲಾಗಿದೆ. ಅಂದರಂತೆ 5 ಸ್ಟಾರ್ ಹೊಟೇಲ್‍ನಲ್ಲಿ 738 ಮಂದಿ, 3 ಸ್ಟಾರ್ ಹೊಟೇಲ್‍ನಲ್ಲಿ  1,096 ಮಂದಿ, ಬಜೆಟ್ ಹೊಟೇಲ್‍ಗಳಲ್ಲಿ 434 ಮಂದಿ ಇದ್ದು, ಒಟ್ಟು ಹೊರದೇಶ, ಮತ್ತು ರಾಜ್ಯದಿಂದ ಬಂದವರು 2,328 ಜನ ಪ್ರಯಾಣಿಕರು ಹೊಟೇಲ್‍ಗಳಲ್ಲಿ ಇದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News