ಮಿಡತೆಗಳು ರಾಜ್ಯಕ್ಕೂ ಪ್ರವೇಶಿಸುವ ಆತಂಕ: ಅಗತ್ಯ ಮುನ್ನಚ್ಚರಿಕೆ ಕೈಗೊಳ್ಳಲು ಸರಕಾರಕ್ಕೆ ಹೆಚ್‌ಡಿಕೆ ಮನವಿ

Update: 2020-05-27 14:48 GMT

ಬೆಂಗಳೂರು, ಮೇ 27: ಉತ್ತರ ಭಾರತವನ್ನು ಬಾಧಿಸುತ್ತಿರುವ ರಕ್ಕಸ ಮಿಡತೆಗಳು ಮಹಾರಾಷ್ಟ್ರ ಪ್ರವೇಶಿಸಿದ್ದು ಕರ್ನಾಟಕಕ್ಕೂ ಪ್ರವೇಶಿಸುವ ಆತಂಕವಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕ್ಷಣಾರ್ಧದಲ್ಲಿ ಬೆಳೆ ತಿಂದು ಹೋಗುವ ಈ ಮಿಡತೆಗಳು ಭವಿಷ್ಯದಲ್ಲಿ ಆಹಾರ ಕೊರತೆಗೆ ಕಾರಣವಾಗುತ್ತದೆ. ಹೀಗಾಗಿ ರಾಜ್ಯ ಸರಕಾರ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವು, ಮಿಡತೆಗಳ ಹಿಂಡು ಮಹಾರಾಷ್ಟ್ರದ ಅಮರಾವತಿಯಲ್ಲಿವೆ ಎಂಬ ಮಾಹಿತಿ ಇದೆ. ಅಮರಾವತಿ ಭೌಗೋಳಿಕವಾಗಿ ನಮ್ಮ ಬೀದರ್, ಕಲಬುರಗಿಗೆ ಹತ್ತಿರದ ಜಿಲ್ಲೆ. ಪೂರ್ವ ಆಫ್ರಿಕಾ, ಇರಾನ್ ಮರುಭೂಮಿಯಲ್ಲಿ ಕಂಡುಬರುವ ಈ ಮಿಡತೆಗಳು ಪಾಕಿಸ್ತಾನದ ಮೂಲಕ ಭಾರತ ಪ್ರವೇಶಿಸಿವೆ. ಇವುಗಳಿಗೆ ಜಿಲ್ಲೆಗಳನ್ನು ದಾಟುವುದು ಅಸಾಧ್ಯವೇನಲ್ಲ' ಎಂದು ಎಚ್ಚರಿಸಿದ್ದಾರೆ.

ಒಂದು ಚದರ ಕಿ.ಮೀ ಪ್ರದೇಶದಲ್ಲಿ 4 ಕೋಟಿ ಮಿಡತೆಗಳು ಇರುತ್ತವೆ. ತಮ್ಮ ದೇಹ ಗಾತ್ರದಷ್ಟೇ ಆಹಾರವನ್ನು ಈ ಮಿಡತೆಗಳು ತಿನ್ನುತ್ತವೆ ಎಂದರೆ ಇವು ಯಾವ ಪ್ರಮಾಣದಲ್ಲಿ ಬೆಳೆ ನಾಶ ಮಾಡುತ್ತವೆ ಎಂಬುದನ್ನು ಲೆಕ್ಕಿಸಬಹುದು. ಹೀಗಾಗಿ ರಾಜಸ್ತಾನ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಔಷಧಿ ಸಿಂಪಡಣೆ ದೊಡ್ಡ ಪ್ರಮಾಣದಿಂದ ನಡೆಯುತ್ತಿದೆ' ಎಂದು ಕುಮಾರಸ್ವಾಮಿ ಗಮನ ಸೆಳೆದಿದ್ದಾರೆ.

ರಾಜ್ಯಕ್ಕೂ ಇವುಗಳ ಭೀತಿ ಇರುವುದರಿಂದ ಸರಕಾರ ಕೂಡಲೇ ರಾಜಸ್ತಾನ, ಮಧ್ಯಪ್ರದೇಶ, ಉತ್ತರ ಪ್ರದೇಶದ ಅಭಿಪ್ರಾಯ ಪಡೆದು ಕಾರ್ಯತಂತ್ರಗಳಿಗೆ ಸಿದ್ಧವಾಗಬೇಕು. ಸಂಭಾವ್ಯ ಅಪಾಯವನ್ನು ಮೊದಲೇ ಹಿಮ್ಮೆಟ್ಟಿಸಬೇಕು. ಬೆಳೆ ತಿಂದು ರೈತರ ಬದುಕು ಅತಂತ್ರ ಮಾಡುವ ಈ ರಕ್ಕಸ ಮಿಡತೆಗಳು ರಾಜ್ಯಕ್ಕೆ ಬಾರದೇ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಅವರು ತಿಳಿಸಿದ್ದಾರೆ.

ಮಧ್ಯಪ್ರದೇಶ ಸೇರಿ ಇತರೆ ರಾಜ್ಯಗಳಲ್ಲಿ ರೈತರ ಬೆಳೆ ಹಾನಿ ಮಾಡುತ್ತಿರುವ ರಕ್ಕಸ ಮಿಡತೆಗಳ ಹಾವಳಿ ರಾಜ್ಯಕ್ಕೆ ಬಾರದಂತೆ ಸರಕಾರ ಈಗಾಗಲೇ ಸೂಕ್ತ ಮುನ್ನಚ್ಚರಿಕೆ ಕೈಗೊಂಡಿದೆ. ಈ ಸಂಬಂಧ ನಾಳೆ(ಮೇ 28) ಕೃಷಿ ವಿವಿ ಸಂಶೋಧಕರು, ಕೀಟಶಾಸ್ತ್ರಜ್ಞರ ಜತೆ ಸಭೆ ನಡೆಸಲಿದ್ದು, ಈ ಬಗ್ಗೆ ಕೃಷಿಕರು ಆತಂಕಪಡುವ ಅಗತ್ಯವಿಲ್ಲ'

-ಬಿ.ಸಿ.ಪಾಟೀಲ್, ಕೃಷಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News