2021ರವರೆಗೂ ಕೊರೋನ ನಮ್ಮೊಂದಿಗೆ ಇರಲಿದೆ: ತಜ್ಞರು

Update: 2020-05-27 14:58 GMT

ಹೊಸದಿಲ್ಲಿ,ಮೇ 27: ಕೊರೋನ ವೈರಸ್ ಸೋಂಕು ಇನ್ನು ಒಂದು ವರ್ಷಕ್ಕೂ ಹೆಚ್ಚಿನ ಅವಧಿಗೆ ಇಲ್ಲಿ ಇರಲಿದೆ ಎಂದು ಬುಧವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಜೊತೆ ಸಂವಾದದಲ್ಲಿ ಹೇಳಿದ ಜಾಗತಿಕ ಆರೋಗ್ಯ ತಜ್ಞರಿಬ್ಬರು, ಸೋಂಕು ಹರಡುವಿಕೆಯನ್ನು ತಡೆಯಲು ಸಮರೋಪಾದಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಕರೆ ನೀಡಿದರು.

ಈ ಮಾರಕ ಕಾಯಿಲೆಗೆ ಇನ್ನೊಂದು ವರ್ಷದಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಅಮೆರಿಕದ ಆರೋಗ್ಯ ತಜ್ಞ ಪ್ರೊ.ಆಶಿಷ್ ಝಾ ವಿಶ್ವಾಸ ವ್ಯಕ್ತಪಡಿಸಿದರೆ,ಕಠಿಣ ಲಾಕ್‌ಡೌನ್ ಆರ್ಥಿಕತೆಯನ್ನು ಹಾಳು ಮಾಡುವುದರಿಂದ ಭಾರತವು ಸೌಮ್ಯ ಲಾಕ್‌ಡೌನ್ ಅಳವಡಿಸಿಕೊಳ್ಳಬೇಕು ಎಂದು ಸ್ವೀಡನ್ನಿನ ಪ್ರೊ.ಜೋಹಾನ್ ಗೀಸೆಕೆ ಅವರು ಹೇಳಿದರು.

ಲಾಕ್‌ಡೌನ್ ಬಳಿಕ ಆರ್ಥಿಕತೆಯು ಮತ್ತೆ ತೆರೆದುಕೊಂಡಾಗ ಭಾರತವು ತನ್ನ ಜನರಲ್ಲಿ ವಿಶ್ವಾಸವನ್ನು ಮೂಡಿಸಬೇಕಿದೆ,ಏಕೆಂದರೆ ಆರ್ಥಿಕತೆಯು ವಿಶ್ವಾಸದ ಮೇಲೆಯೇ ನಿಂತಿದೆ ಎಂದು ಹೇಳಿದ ಟಿಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಗ್ಲೋಬಲ್ ಹೆಲ್ತ್ ಪ್ರೊಫೆಸರ್ ಮತ್ತು ಹಾರ್ವರ್ಡ್ ಗ್ಲೋಬಲ್ ಹೆಲ್ತ್ ಇನ್‌ಸ್ಟಿಟ್ಯೂಟ್ ನ ನಿರ್ದೇಶಕರೂ ಆಗಿರುವ ಝಾ, ಕೊರೋನ ವೈರಸ್ ಇನ್ನೂ 18-20 ತಿಂಗಳುಗಳ ಸಮಸ್ಯೆಯಾಗಿದೆ ಮತ್ತು 2021ರವರೆಗೂ ವಿಶ್ವಕ್ಕೆ ಇದರಿಂದ ಮುಕ್ತಿ ದೊರೆಯುವುದಿಲ್ಲ ಎಂದರು. ರೋಗದ ಹರಡುವಿಕೆಯನ್ನು ತಡೆಯಲು ಅಧಿಕ ಅಪಾಯದ ಪ್ರದೇಶಗಳಲ್ಲಿ ಜನರನ್ನು ಸಮರೋಪಾದಿಯಲ್ಲಿ ಪರೀಕ್ಷೆಗೊಳಪಡಿಸುವ ಕಾರ್ಯತಂತ್ರದ ಅಗತ್ಯವಿದೆ ಎಂದರು.

 ತಜ್ಞರೊಂದಿಗೆ ಸಂವಾದ ವೇಳೆ ರಾಹುಲ್ ಅವರು,ಕೋವಿಡ್-19 ಬಿಕ್ಕಟ್ಟಿನ ಬಳಿಕ ಬದುಕು ಬದಲಾಗಲಿದೆ. 9/11 ಹೊಸ ಅಧ್ಯಾಯವಾಗಿತ್ತು ಎಂದು ಜನರು ಹೇಳುತ್ತಾರೆ. ಇದು (ಕೋವಿಡ್-19) ಹೊಸ ಪುಸ್ತಕವಾಗಲಿದೆ ಎಂದರು.

 ಲಾಕ್‌ಡೌನ್ ಅನ್ನು ಹಂತಹಂತವಾಗಿ ಸಡಿಲಿಸಬೇಕು. ಭಾರತವು ಸಾಧ್ಯವಾದಷ್ಟು ಮೃದು ಲಾಕ್‌ಡೌನ್ ಹೊಂದಿರಬೇಕು ಎಂದು ಹೇಳಿದ ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಶನ್ ಆ್ಯಂಡ್ ಕಂಟ್ರೋಲ್‌ನ ಮಾಜಿ ಮುಖ್ಯ ವಿಜ್ಞಾನಿ ಪ್ರೊ.ಗೀಸೆಕೆ ಅವರು,ಕೊರೋನ ವೈರಸ್ ಸಾಂಕ್ರಾಮಿಕವು ಕಾಡ್ಗಿಚ್ಚಿನಂತೆ ವಿಶ್ವಾದ್ಯಂತ ಹರಡುತ್ತಿದೆ ಮತ್ತು ಹೆಚ್ಚುಕಡಿಮೆ ಜಗತ್ತಿನ ಪ್ರತಿಯೊಬ್ಬರೂ ಸೋಂಕಿಗೊಳಗಾಗಲಿದ್ದಾರೆ ಎಂದರು.

 ವಿಶ್ವವು ಸಾಂಕ್ರಾಮಿಕ ರೋಗಗಳ ಯುಗವನ್ನು ಪ್ರವೇಶಿಸುತ್ತಿದೆ ಎಂದ ಝಾ, “ಇದು ಮುಂದಿನ 20 ವರ್ಷಗಳಲ್ಲಿ ನಾನು ಮತ್ತು ನೀವು ನೋಡಲಿರುವ ಕೊನೆಯ ಬೃಹತ್ ಜಾಗತಿಕ ಪಿಡುಗು ಅಲ್ಲ ಎನ್ನುವ ವಿಶ್ವಾಸ ನನಗಿದೆ. ಮುಂಬರುವ ವರ್ಷಗಳು ಮತ್ತು ದಶಕಗಳಲ್ಲಿ ವಿಶ್ವವು ಇನ್ನಷ್ಟು ಸಾಂಕ್ರಾಮಿಕಗಳಿಗೆ ಸಾಕ್ಷಿಯಾಗಲಿದೆ. ಕೊರೋನ ವೈರಸ್ ಬಿಕ್ಕಟ್ಟಿನಿಂದ ಹೊರಬರುತ್ತಿದ್ದಂತೆ ಮುಂದಿನ ಪಿಡುಗು ಎದುರಿಸಲು ನಾವು ಹೇಗೆ ಸಜ್ಜಾಗಲಿದ್ದೇವೆ ಎನ್ನುವ ಪ್ರಶ್ನೆಯನ್ನು ಸ್ವಯಂ ಕೇಳಿಕೊಳ್ಳಬೇಕಿದೆ” ಎಂದರು.

 ಕೋವಿಡ್-19ಗೆ ಲಸಿಕೆ ಆವಿಷ್ಕಾರ ಕುರಿತಂತೆ ಝಾ,ಅಮೆರಿಕ ಮತ್ತು ಚೀನಾ ಸೇರಿದಂತೆ ಅಭಿವೃದ್ಧಿ ಹಂತದಲ್ಲಿರುವ 2-3 ಲಸಿಕೆಗಳು ಕೊಂಚ ಭರವಸೆಯನ್ನು ಮೂಡಿಸಿವೆ. ಕೋವಿಡ್-19 ಅನ್ನು ಹಿಮ್ಮೆಟ್ಟಿಸಲು ಅಷ್ಟೂ ಲಸಿಕೆಗಳು ಅಥವಾ ಒಂದು ಲಸಿಕೆ ಯಶಸ್ವಿಯಾಗಬಹುದು. ಮುಂದಿನ ವರ್ಷ ಇಂತಹ ಲಸಿಕೆ ಬಳಕೆಗೆ ದೊರೆಯಲಿದೆ ಎಂಬ ಭರವಸೆ ತನಗಿದೆ. ತನಗೆಷ್ಟು ಲಸಿಕೆಗಳು ಅಗತ್ಯವಿದೆ ಎನ್ನುವ ಬಗ್ಗೆ ಭಾರತವು ಯೋಜನೆಯೊಂದನ್ನು ಹೊಂದಿರಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News