ನಿಜಗುಣಾನಂದ ಸ್ವಾಮೀಜಿಗೆ ಜೀವ ಬೆದರಿಕೆ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬೆಳಗಾವಿ ಡಿಸಿ ಕಚೇರಿ ಮುಂಭಾಗ ಧರಣಿ

Update: 2020-05-27 15:25 GMT

ಬೆಳಗಾವಿ, ಮೇ 27: ವಿಚಾರವಾದಿ ಮುಂಡರಗಿಯ ನಿಜಗುಣಾನಂಂದ ಸ್ವಾಮೀಜಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ರಾಷ್ಟ್ರೀಯ ಬಸವ ಸೇನೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.

ರಾಜ್ಯದಲ್ಲಿ ವಚನ ತತ್ವದ ಮೂಲಕ ವೈಚಾರಿಕ ಅರಿವು ಮೂಡಿಸುತ್ತಿರುವ ನಿಜಗುಣಾನಂದ ಸ್ವಾಮೀಜಿಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿದೆ. ಕಳೆದ ಫೆಬ್ರವರಿಯಲ್ಲೂ ಅವರಿಗೆ ಬೆದರಿಕೆ ಪತ್ರ ಬಂದಿತ್ತು. ಈಗ ಫೇಸ್‍ಬುಕ್ ಮೂಲಕ ಬೆದರಿಕೆ ಹಾಕಲಾಗಿದೆ. ಅಪಾಯ ಎದುರಾಗುವ ಮುನ್ನ ಬೆದರಿಕೆ ಹಾಕಿರುವ ಆರೋಪಿಗಳನ್ನು ಬಂಧಿಸಬೇಕೆಂದು ರಾಷ್ಟ್ರೀಯ ಬಸವ ಸಮಿತಿಯ ಜಿಲ್ಲಾಧ್ಯಕ್ಷ ಶಂಕರ್ ಗೂಡಸ್ ಒತ್ತಾಯಿಸಿದ್ದಾರೆ.

ಸಂಶೋಧಕ ಎಂ.ಎಂ.ಕಲಬುರ್ಗಿಯವರನ್ನು ಕೊಂದಂತೆ ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ವಿಚಾರವಾದಿಗಳನ್ನು ಕೊಲ್ಲಲಾಗುವುದೆಂದು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ. ಇಂತಹ ಆರೋಪಿಗಳನ್ನು ಬಂಧಿಸುವಂತೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಅವರು ವಿಷಾದಿಸಿದರು.

ಈಗ ಅಮಿತ್ ಜೈನ್ ಎಂಬ ಆರೋಪಿ ನಿಜಗುಣಾನಂದ ಸ್ವಾಮೀಜಿಯನ್ನು ಕೊಲ್ಲಲಾಗುವುದೆಂದು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ. ಕೂಡಲೇ ಈತನನ್ನು ಬಂಧಿಸಿ ವಿಚಾರಣೆ ನಡೆಸುವುದರ ಮೂಲಕ ಇದರ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ರಾಷ್ಟ್ರೀಯ ಬಸವ ಸಮಿತಿ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News