ಚಿಕ್ಕಮಗಳೂರು: ಭೂಮಿ ಖರೀದಿ ವ್ಯವಹಾರದ ವೇಳೆ ಗುಂಡಿನ ದಾಳಿ, ಇಬ್ಬರಿಗೆ ಗಂಭೀರ ಗಾಯ

Update: 2020-05-27 16:22 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಮೇ 27: ರಿಯಲ್ ಎಸ್ಟೇಟ್ ವಿಚಾರವಾಗಿ ಆನ್‍ಲೈನ್‍ನಲ್ಲಿ ಪರಿಚಿತರಾದ ವ್ಯಕ್ತಿಗಳೊಂದಿಗೆ ಭೂಮಿ ಖರೀದಿ ವ್ಯವಹಾರದ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ಮೇಲೆ ಪಿಸ್ತೂಲ್‍ ನಿಂದ ಗುಂಡು ಹಾರಿಸಿರುವ ಘಟನೆ ಬುಧವಾರ ಸಂಜೆ ನಡೆದಿದೆ.

ಚಿಕ್ಕಮಗಳೂರು ನಗರದ ನಿವಾಸಿ ಕಲ್ಯಾಣ ಕುಮಾರ್ ಹಾಗೂ ಖಾಸಗಿ ಕಾಲೇಜಿನ ಅತಿಥಿ ಉಪನ್ಯಾಸಕ ಸುಮಂತ್ ಎಂಬವರಿಗೆ ಗುಂಡು ತಗಲಿ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಿಂದ ಬಂದ ರಿಯಲ್ ಎಸ್ಟೇಟ್ ಉದ್ಯಮಿ ಕಾರ್ತಿಕ್ ಹಾಗೂ ಕಡೂರು ತಾಲೂಕಿನ ಮತ್ತೋರ್ವ ವ್ಯಕ್ತಿಯು ಸಖರಾಯಪಟ್ಟಣದ ಸಮೀಪದ ಬಣೂರು ಗ್ರಾಮದ ಮನೆಯೊಂದರಲ್ಲಿ ಕಲ್ಯಾಣ್‍ ಕುಮಾರ್ ಹಾಗೂ ಸುಮಂತ್ ಬಳಿ ವ್ಯವಹಾರ ನಡೆಸುತ್ತಿದ್ದರು. ಈ ವೇಳೆ ಕಾರ್ತಿಕ್ ಇಬ್ಬರ ಮೇಲೂ ಗುಂಡು ಹಾರಿಸಿದ್ದಾನೆಂದು ತಿಳಿದುಬಂದಿದೆ.

ಕಲ್ಯಾಣಕುಮಾರ್ ಮತ್ತು ಸುಮಂತ್ ಬಳಿ 25 ಲಕ್ಷ ರೂ. ಹಣ ಇದ್ದುದರಿಂದ ಅದನ್ನು ದೋಚಲು ಗುಂಡು ಹಾರಿಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯಿಂದ ಸುಮಂತ್ ಹೊಟ್ಟೆಯ ಭಾಗ ಹಾಗೂ ಕಲ್ಯಾಣ ಕುಮಾರ್ ಅವರ ಎದೆ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಗೊಂಡ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕಾರಿ ಶೃತಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದ್ದು, ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News