ಪ್ರಾರ್ಥನಾ ಕೇಂದ್ರಗಳನ್ನು ತೆರೆಯುವಂತೆ ಸರಕಾರಕ್ಕೆ ವಕ್ಫ್ ಬೋರ್ಡ್ ಮನವಿ

Update: 2020-05-27 16:33 GMT

ಬೆಂಗಳೂರು, ಮೇ 27: ಮಸ್ಜಿದ್, ದರ್ಗಾ, ಆಶೂರ ಖಾನ ಸೇರಿದಂತೆ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಲಾಕ್‍ಡೌನ್ ಮಾರ್ಗಸೂಚಿಗಳಲ್ಲಿ ವಿನಾಯಿತಿ ನೀಡುವಂತೆ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಕೋವಿಡ್-19 ಸಾಂಕ್ರಾಮಿಕದಿಂದಾಗಿ ಭಾರತ ಸರಕಾರ ಹಾಗೂ ರಾಜ್ಯ ಸರಕಾರವು ಎಲ್ಲ ಧಾರ್ಮಿಕ ಕೇಂದ್ರಗಳನ್ನು ಮುಚ್ಚುವಂತೆ ಸೂಚಿಸಿತ್ತು. ಅದರಂತೆ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ರಾಜ್ಯ ವಕ್ಫ್ ಬೋರ್ಡ್ ಕಾಲಕಾಲಕ್ಕೆ ಸುತ್ತೋಲೆಗಳನ್ನು ಹೊರಡಿಸಿ ದಿನನಿತ್ಯದ ನಮಾಝ್, ಶುಕ್ರವಾರದ ನಮಾಝ್ ಮಸೀದಿಗಳಲ್ಲಿ ನಿರ್ವಹಿಸುವುದು, ಶಬೇ ಖದ್ರ್ ಸಂದರ್ಭದಲ್ಲಿ ಖಬರಸ್ತಾನ್‍ಗಳಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಿತು ಎಂದು ತಿಳಿಸಿದ್ದಾರೆ.

ಈದುಲ್ ಫಿತ್ರ್ ನಮಾಝ್ ಅನ್ನು ಮಸೀದಿ ಹಾಗೂ ಈದ್ಗಾಗಳಲ್ಲಿ ಸಾಮೂಹಿಕವಾಗಿ ನೆರವೇರಿಸುವುದನ್ನು ನಿರ್ಬಂಧಿಸಲಾಯಿತು. ರಾಜ್ಯದ ಮುಸ್ಲಿಮರು ಈ ಮಾರ್ಗಸೂಚಿಗಳನ್ನು ಅತ್ಯಂತ ಗೌರವಯುತವಾಗಿ ಪಾಲಿಸಿಕೊಂಡು ಬಂದಿದ್ದಾರೆ ಎಂದು ಮುಹಮ್ಮದ್ ಯೂಸುಫ್ ಹೇಳಿದ್ದಾರೆ.

ಮಸ್ಜಿದ್, ದರ್ಗಾ ಹಾಗೂ ಆಶೂರ ಖಾನಗಳಲ್ಲಿ ಸ್ವಚ್ಛತೆ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಾಮೂಹಿಕ ನಮಾಝ್ ನಿರ್ವಹಿಸಲು ಅವಕಾಶ ನೀಡುವಂತೆ ಇಡೀ ಮುಸ್ಲಿಮ್ ಸಮುದಾಯ ಹಾಗೂ ವಕ್ಫ್ ಬೋರ್ಡ್ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News