ಮೂಡಿಗೆರೆ: ಕಾಡಾನೆಗಳ ಕಾಟಕ್ಕೆ ಕಂಗಾಲಾದ ರೈತರು, ಕಾಫಿ ಬೆಳೆಗಾರರು

Update: 2020-05-27 17:48 GMT

ಚಿಕ್ಕಮಗಳೂರು, ಮೇ 27: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾಫಿ, ಬಾಳೆ ಬೆಳೆಗಾರರ ಪಾಲಿಗೆ ಇದೀಗ ಕಾಡಾನೆಗಳ ಕಾಟ ಶುರುವಾಗಿದೆ. ಚಾರ್ಮಾಡಿ, ಸಕಲೇಶಪುರ ತಾಲೂಕಿನ ದಟ್ಟ ಕಾಡುಗಳಿಂದ ತಾಲೂಕಿನ ಅರಣ್ಯದಂಚಿನ ಕಾಡುಗಳಿಗೆ ಕಳೆದ ಮೂರು ದಿನಗಳಿಂದ ಕಾಡಾನೆಗಳು ದಾಂಗುಡಿ ಇಡುತ್ತಿದ್ದು, ಕಾಫಿ ತೋಟಗಳನ್ನು ತುಳಿದು ಹಾಳುಗೆಡವುತ್ತಿವೆ.

ಮೂಡಿಗೆರೆ ತಾಲೂಕಿನ ಉದುಸೆ, ಹೊತ್ತಿಕೆರೆ ಕಿರುಗುಂದ ಭಾಗದಲ್ಲಿನ ವಿವಿಧ ಕಾಫಿ ತೋಟ, ಎಸ್ಟೇಟ್‍ಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾಫಿ ಬೆಳೆಗಾರರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿನ ಕಾಫಿ ಗಿಡಗಳು, ಬಾಳೆ ತೋಟಗಳಿಗೆ ಲಗ್ಗೆ ಇಡುತ್ತಿದ್ದು, ಗಿಡಗಳನ್ನು ತುಳಿದು ಹಾಳು ಮಾಡಿವೆ. ಬುಧವಾರ ಸಂಜೆ ವೇಳೆ ತಾಲೂಕಿನ ಹನುಮನಹಳ್ಳಿಯ ಪ್ರೀತಮ್ ಎಸ್ಟೇಟ್‍ಗೆ ನುಗ್ಗಿದ್ದ ಕಾಡಾನೆಗಳ ಹಿಂಡು ಸಂಜೆ ವೇಳೆ ಜಿ.ಹೊಸಳ್ಳಿಯ ಕಾಫಿ ತೋಟವೊಂದರಲ್ಲಿ ಬೀಡು ಬಿಟ್ಟಿವೆ ಎಂದು ತಿಳಿದು ಬಂದಿದೆ.

ಸಕಲೇಶಪುರ ಅರಣ್ಯದ ಅಂಚಿಗೆ ಹೊಂದಿಕೊಂಡಿರುವ ಮೂಡಿಗೆರೆ ತಾಲೂಕಿನ ಕಾಫಿತೋಟ, ಬಾಳೆ ತೋಟ, ಅಡಿಕೆತೋಟಗಳೂ ಸೇರಿದಂತೆ ಅಲ್ಲಲ್ಲಿ ರೈತರು ಬೆಳೆದ ತರಕಾರಿ ಬೆಳೆಗಳನ್ನೂ ಕಾಡಾನೆಗಳು ತುಳಿದು ತಿಂದು, ತುಳಿದು ಹಾಳು ಮಾಡಿದ್ದು, ಆನೆಗಳ ಹಾವಳಿಯಿಂದಾಗಿ ಕಾಫಿ ಬೆಳೆಗಾರರು, ರೈತರಿಗೆ ಭಾರೀ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ತಾಲೂಕಿನ ಉದುಸೆ ಗ್ರಾಮದಲ್ಲಿ ಮಂಗಳವಾರ ಸಂಜೆ ಕಾಣಿಸಿಕೊಂಡಿರುವ ಎರಡು ಕಾಡಾನೆಗಳು ಶುಂಠಿಗದ್ದೆಯಲ್ಲಿರಿಸಿದ್ದ ಔಷಧದ ಬ್ಯಾರಲ್ ಹಾಗೂ ತಂತಿಬೇಲಿಯನ್ನು ಧ್ವಂಸ ಮಾಡಿವೆ. ಬುಧವಾರ ರಾತ್ರಿ ಸಮಯದಲ್ಲಿ ತಾಲೂಕಿನ ಹೊತ್ತಿಕೆರೆ, ಕಿರುಗುಂದ ಗ್ರಾಮಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಕಾಫಿ ತೋಟಗಳನ್ನು ಹಾಳುಗೆಡವುತ್ತಿವೆ ಎಂದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಆನೆಗಳನ್ನು ಕಾಡಿಗೆ ಅಟ್ಟಲು ಗ್ರಾಮಸ್ಥರು ಕಳೆದ ಮೂರು ದಿನಗಳಿಂದಲೂ ಪ್ರಯತ್ನಿಸುತ್ತಿದ್ದು, ಗ್ರಾಮಸ್ಥರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ತೋಟಗಳಲ್ಲಿ ಮೂರ್ನಾಲ್ಕು ಆನೆಗಳು ಬೀಡುಬಿಟ್ಟಿದ್ದು, ಗ್ರಾಮಸ್ಥರು ರಾತ್ರಿ, ಹಗಲಿನ ವೇಳೆ ತಿರುಗಾಡಲು ಭಯಪಡುವಂತಾಗಿದೆ. ಬೆಳೆ ನಷ್ಟ ಸಂಬಂಧ ಅರಣ್ಯಾಧಿಕಾರಿಗಳಿಗೆ ರೈತರು ಮಾಹಿತಿ ನೀಡಿದ್ದು, ಗುರುವಾರ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯೊಂದಿಗೆ ಬೆಳೆ ನಷ್ಟದ ಸಮೀಕ್ಷೆ ಮಾಡಲಿದ್ದಾರೆ. ಸಕಲೇಶಪುರ ತಾಲೂಕಿನ ಕಾಡಂಚಿನ ಭಾಗದಿಂದ ಈ ಆನೆಗಳು ಬಂದಿರಬಹುದೆಂದು ಗ್ರಾಮಸ್ಥರು ಹೇಳುತ್ತಿದ್ದು, ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗೆ ಅಟ್ಟಲು ಕೂಡಲೇ ತುರ್ತು ಕ್ರಮಕೈಗೊಳ್ಳಬೇಕು. ಅಲ್ಲದೇ ಬೆಳೆ ನಷ್ಟ ಅನುಭವಿಸಿದವರಿಗೆ ಇಲಾಖೆ ವತಿಯಿಂದ ಪರಿಹಾರವನ್ನೂ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಮೂಡಿಗೆರೆ ಸೇರಿದಂತೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಪ್ರತೀ ವರ್ಷ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಕಾಡಾನೆಗಳ ದಾಳಿಯಿಂದ ಅನೇಕ ಸಾವಿನ ಪ್ರಕರಣಗಳು ನಡೆದಿವೆ. ಇದು ಈ ಭಾಗದ ಕಾಫಿ, ಅಡಿಕೆ, ಬಾಳೆ ಬೆಳೆದವರೂ ಸೇರಿದಂತೆ ಕಾಡಂಚಿನ ಜನರ ನಿದ್ದೆಗೆಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆನೆ ಕಾರಿಡಾರ್ ಗುರುತಿಸಿ ಕಾಡಿನಿಂದ ತೋಟಗಳಿಗೆ ಆನೆಗಳು ನುಗ್ಗದಂತೆ ಆ ಭಾಗದಲ್ಲಿ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಿಸುವಂತೆ ರೈತರು, ಕಾಫಿ ಬೆಳಗಾರರು ಅನೇಕ ಬಾರಿ ಜನಪ್ರತಿನಿಧಿಗಳು, ಸರಕಾರಕ್ಕೆ ಮನವಿ ಮಾಡಿದ್ದರು. ಸರಕಾರ, ಜಿಲ್ಲಾಡಳಿತ ರೈಲ್ವೆ ಕಂಬಿಗಳ ಬ್ಯಾರಿಕೇಡ್ ನಿರ್ಮಾಣಕ್ಕೆ ಕ್ರಮಕೈಗೊಳ್ಳುವುದಾಗಿ ಬೆಳೆಗಾರರಿಗೆ ಈಗಾಗಲೇ ಭರವಸೆ ನೀಡಿದ್ದು, ಈ ಭರವಸೆ ನೀಡಿ ಮೂರ್ನಾಲ್ಕು ವರ್ಷ ಕಳೆದಿದ್ದರೂ ಕೊನೆ ಪಕ್ಷ ಆನೆಕಾರಿಡಾರ್‍ಗಳನ್ನು ಗುರುತಿಸುವ ಕೆಲಸವನ್ನೂ ಸರಕಾರ ಮಾಡಿಲ್ಲ ಎಂದು ಮೂಡಿಗೆರೆ ತಾಲೂಕಿನ ಕಾಫಿ ಬೆಳೆಗಾರರು ವಾರ್ತಾಭಾರತಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News