ಕರ್ನಾಟಕಕ್ಕೆ 11.80 ಲಕ್ಷ ಟನ್ ಆಹಾರ ಪೂರೈಕೆ: ಡಿ.ವಿ. ಪ್ರಸಾದ್

Update: 2020-05-28 16:55 GMT

ಬೆಂಗಳೂರು, ಮೇ 28: ಕೊರೋನ ಲಾಕ್‍ಡೌನ್ ಅವಧಿಯಲ್ಲಿ ಭಾರತೀಯ ಆಹಾರ ನಿಗಮದ ವತಿಯಿಂದ ಕರ್ನಾಟಕ ರಾಜ್ಯಕ್ಕೆ ವಿವಿಧ ಯೋಜನೆಗಳ ಅಡಿಯಲ್ಲಿ 405 ರೈಲುಗಳ ಮೂಲಕ 2,507 ಕೋಟಿ ಮೌಲ್ಯದ 11.80 ಲಕ್ಷ ಟನ್ ಆಹಾರವನ್ನು ಪೂರೈಸಲಾಗಿದೆ ಎಂದು ಭಾರತೀಯ ಆಹಾರ ನಿಗಮದ ಅಧ್ಯಕ್ಷ ಡಿ.ವಿ. ಪ್ರಸಾದ್ ತಿಳಿಸಿದ್ದಾರೆ. 

ಇದು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಪೂರೈಸಲಾದ 2,340 ಕೋಟಿ ರೂ. ಮೌಲ್ಯದ 6 ಲಕ್ಷ ಟನ್ ಉಚಿತ ಆಹಾರವನ್ನೂ ಒಳಗೊಂಡಿದೆ. ಜೊತೆಗೆ ಭಾರತ ಸರಕಾರ ವಲಸೆ ಕಾರ್ಮಿಕರಿಗಾಗಿ 156 ಕೋಟಿ ರೂ. ಮೌಲ್ಯದ 40 ಸಾವಿರ ಮೆಟ್ರಿಕ್ ಟನ್ ಆಹಾರಧಾನ್ಯ ಒದಗಿಸುತ್ತಿದೆ.

ರಾಜ್ಯ ಸರಕಾರ ಈವರೆಗೆ ರಾಜ್ಯದಾದ್ಯಂತ 2373 ಕೋಟಿ ರೂ. ಮೌಲ್ಯದ ಆಹಾರಧಾನ್ಯವನ್ನು ಭಾರತೀಯ ಆಹಾರ ನಿಗಮದಿಂದ ಎತ್ತುವಳಿ ಮಾಡಿದೆ. ಇದರ ಜೊತೆಗೆ ಭಾರತೀಯ ಆಹಾರ ನಿಗಮ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ (ಎನ್‍ಎಫ್‍ಎಸ್‍ಎ) ಅಡಿಯಲ್ಲಿ 3.83 ಲಕ್ಷ ಟನ್, ಮುಕ್ತ ಮಾರಾಟದಲ್ಲಿ 1.20 ಲಕ್ಷ ಟನ್ ಮತ್ತು 41 ಸಾವಿರ ಟನ್ ಆಹಾರಧಾನ್ಯವನ್ನು ರಾಜ್ಯದ ಹೆಚ್ಚುವರಿ ಫಲಾನುಭವಿಗಳಿಗಾಗಿ ಪೂರೈಕೆ ಮಾಡಿದೆ. 

ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಅತಿ ಹೆಚ್ಚು ಅಕ್ಕಿ ಪಡೆದುಕೊಳ್ಳುವ ರಾಜ್ಯವಾಗಿದ್ದು, ಪಂಜಾಬ್, ಹರಿಯಾಣ ಮತ್ತು ಆಂಧ್ರಪ್ರದೇಶದಿಂದ ಅಕ್ಕಿಯನ್ನು ಪಡೆದುಕೊಳ್ಳುತ್ತಿದೆ. ಲಾಕ್‍ಡೌನ್ ಆರಂಭವಾದಾಗಿನಿಂದ ಕರ್ನಾಟಕ ಒಂದರಲ್ಲೇ ನಿಗಮ 4.54 ಕೋಟಿ ಚೀಲಗಳಷ್ಟು ಆಹಾರ ಧಾನ್ಯ ನಿರ್ವಹಣೆ ಮಾಡಿದ್ದು ಇದು ಸಾಮಾನ್ಯ ಕಾರ್ಯಾಚರಣೆಗಿಂತ ದುಪ್ಪಟ್ಟಾಗಿದೆ ಎಂದು ಪ್ರಕಟನೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News