ಕೆಲ ದಿನಗಳಲ್ಲಿ ರೈತರ ಖಾತೆಗೆ ಹಣ ಜಮಾ: ಸಚಿವ ನಾರಾಯಣಗೌಡ

Update: 2020-05-28 16:57 GMT

ಬೆಂಗಳೂರು, ಮೇ 28: ಕೊರೋನ ಸೋಂಕು ತಡೆಗೆ ಹೇರಿದ್ದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹೂವು, ಹಣ್ಣು, ತರಕಾರಿ ಬೆಳೆ ನಾಶವಾದ ರೈತರಿಗೆ ಇನ್ನು ಕೆಲವೇ ದಿನಗಳಲ್ಲಿ ಅವರವರ ಖಾತೆಗಳಿಗೆ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕಾ ಸಚಿವ ನಾರಾಯಣಗೌಡ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಳೆ ನಷ್ಟಕ್ಕೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಂಪೂರ್ಣ ವಿವರ ಸಿದ್ದಪಡಿಸಿದ ಬಳಿಕ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು. ಮೊದಲಿಗೆ ಹೂವು ಬೆಳೆಗಾರರಿಗೆ ಸರಕಾರ ಪರಿಹಾರ ಘೋಷಣೆ ಮಾಡಿದೆ.

ಒಟ್ಟು 12,735 ಹೆಕ್ಟೇರ್ ಪ್ರದೇಶದಲ್ಲಿ ಹೂವು ಬೆಳೆಯಲಾಗಿದ್ದು, ಸೂಕ್ತ ಮಾರುಕಟ್ಟೆ ಇಲ್ಲದೆ ಸಂಪೂರ್ಣ ನಾಶವಾಗಿದೆ. ಹೀಗಾಗಿ ಪ್ರತಿ ಹೆಕ್ಟೇರ್‍ಗೆ ತಲಾ 25 ಸಾವಿರ ರೂ.ನಂತೆ ಒಟ್ಟು 31.83 ಕೋಟಿ ರೂ.ಗಳನ್ನು ಪರಿಹಾರ ನೀಡಲಾಗುವುದು ಎಂದ ಅವರು, ಹಣ್ಣು-ತರಕಾರಿ ಬೆಳೆಗಳು ನಷ್ಟವಾಗಿದ್ದು, ಅವರಿಗೆ ಪರಿಹಾರ ವಿತರಣೆ ಮಾಡಲಾಗುವುದು ಎಂದರು.

50 ಸಾವಿರಕ್ಕೂ ಅಧಿಕ ಹೆಕ್ಟೇರ್‍ನಲ್ಲಿ ತರಕಾರಿ, 41,054 ಹೆಕ್ಟೇರ್‍ನಲ್ಲಿ ಹಣ್ಣುಗಳನ್ನು ಬೆಳೆದಿದ್ದು ಸಂಪೂರ್ಣ ನಾಶವಾಗಿದ್ದು, ಹೀಗಾಗಿ ಪ್ರತಿ ಹೆಕ್ಟೇರ್‍ಗೆ 15 ಸಾವಿರ ರೂ.ಪರಿಹಾರ ಘೋಷಣೆ ಮಾಡಿದ್ದು, ಇದಕ್ಕಾಗಿ ಸರಕಾರ 137 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಈಗಾಗಲೇ ಬೆಳೆ ಸಮೀಕ್ಷೆ ವರದಿ ಸಿದ್ಧಪಡಿಸಿದ್ದು ಶೀಘ್ರವೇ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಇನ್ನೂ ಸರಕಾರದಿಂದ ಯಾವುದೇ ಪರಿಹಾರ ಬಂದಿಲ್ಲ ಎಂದು ಬೆಳೆಗಾರರು ಯಾವುದೇ ಕಾರಣಕ್ಕೂ ಆತಂಕಗೊಳ್ಳುವ ಅಗತ್ಯವಿಲ್ಲ. ಈಗಾಗಲೇ ಇಲಾಖೆ ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದು ಇನ್ನೂ ಕೆಲವೇ ದಿನಗಳಲ್ಲಿ ಎಲ್ಲ ರೈತರಿಗೆ ಪರಿಹಾರ ವಿತರಣೆ ಮಾಡಲಾಗುವುದು ಎಂದು ನಾರಾಯಣಗೌಡ ಸ್ಪಷ್ಟಣೆ ನೀಡಿದರು.

ಮಿಡತೆಗಳ ಹಾವಳಿ ಸಂಬಂಧ ಈಗಾಗಲೇ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಕೃಷಿ ತಜ್ಞರ ಸಭೆ ನಡೆಸಿದ್ದು, ಮಹಾರಾಷ್ಟ್ರ ಗಡಿಭಾಗದ ಬೀದರ್, ಕಲಬುರಗಿ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಅಧಿಕಾರಿಗಳ ತಂಡವನ್ನು ಕಳುಹಿಸಲಾಗಿದೆ. ರಾಜ್ಯಕ್ಕೆ ಮಿಡತೆಗಳ ಹಾವಳಿ ಬಾಧಿಸದಂತೆ ಸರಕಾರ ಸೂಕ್ತ ಮುನ್ನಚ್ಚರಿಕೆ ಕೈಗೊಂಡಿದ್ದು, ರೈತರು ಆತಂಕಗೊಳ್ಳುವ ಅಗತ್ಯವಿಲ್ಲ.

-ನಾರಾಯಣಗೌಡ ತೋಟಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News