ಹೊಟೇಲ್ ಶುಲ್ಕ ದುಬಾರಿ, ಮನೆಯಲ್ಲೇ ಕ್ವಾರಂಟೈನ್‍ಗೆ ಅವಕಾಶ ಕೊಡಿ: ಸರಕಾರಕ್ಕೆ ಮನವಿ

Update: 2020-05-28 16:58 GMT

ಬೆಂಗಳೂರು, ಮೇ 28: ಕೊರೋನ ವೈರಸ್ ಹಿನ್ನೆಲೆಯಲ್ಲಿ ಹೊರಗಡೆಯಿಂದ ರಾಜ್ಯಕ್ಕೆ  ಬಂದವರನ್ನು ಕನಿಷ್ಠ 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತಿದೆ. ಅದೇ ರೀತಿಯಾಗಿ ಮಲೇಷ್ಯಾದಿಂದ ಬಂದ ತಂಡವೊಂದು 7 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ್ದು, ಉಳಿದ 7 ದಿನ ಮನೆಯಲ್ಲೇ ಕ್ವಾರಂಟೈನ್ ಆಗುತ್ತೇವೆ. ಹೊಟೇಲ್ ಶುಲ್ಕ ತುಂಬಾ ದುಬಾರಿ, ಕಟ್ಟಲು ಆಗುತ್ತಿಲ್ಲ ಎಂದು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಮಾರತ್‍ಹಳ್ಳಿಯ ಫ್ಯಾಬ್ ಎಕ್ಸ್ ಪ್ರೆಸ್ ಬಾಲಿ ಹೊಟೇಲ್‍ನಲ್ಲಿರುವವರು ತಮ್ಮ ಸಂಕಷ್ಟ ಹೇಳಿಕೊಂಡಿದ್ದಾರೆ. ನಾವು ಮೇ 19ರಂದು ಮಲೇಷ್ಯಾ ದಿಂದ ಬೆಂಗಳೂರಿಗೆ ತಲುಪಿದೆವು. ಮಲೇಷ್ಯಾದಲ್ಲೇ ಎರಡು ತಿಂಗಳು ಕ್ವಾರಂಟೈನ್‍ನಲ್ಲಿ ಇದ್ದೆವು. 

ಅಲ್ಲಿ ಪರೀಕ್ಷಾ ವರದಿ ನೆಗೆಟಿವ್ ಬಂದ ನಂತರ ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಏಳು ದಿನಗಳ ಕ್ವಾರಂಟೈನ್ ಮುಗಿಸಿದ್ದೇವೆ. ಕೊರೋನ ಟೆಸ್ಟ್ ವರದಿಯಲ್ಲೂ ನೆಗೆಟಿವ್ ಬಂದಿದೆ. ಉಳಿದ ಏಳು ದಿನ ಮನೆಯಲ್ಲೇ ಇರುತ್ತೇವೆ. ದಯವಿಟ್ಟು ನಮ್ಮನ್ನು ಇಲ್ಲಿಂದ ಮುಕ್ತಗೊಳಿಸಿ, ಹೊಟೇಲ್ ಬಾಡಿಗೆ ಸಿಕ್ಕಾಪಟ್ಟೆ ದುಬಾರಿಯಾಗಿದೆ ಎಂದು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಅಲ್ಲದೆ, ಬೇರೆ ರಾಜ್ಯಗಳಲ್ಲಿ ವಿಮಾನದ ಟಿಕೆಟ್‍ಗೆ 14 ಸಾವಿರ ರೂ.ಪಡೆದರೆ ನಮ್ಮಲ್ಲಿ ಮಾತ್ರ 35 ಸಾವಿರ ರೂ.ಪಡೆದಿದ್ದಾರೆ. ಇದರ ಜೊತೆಗೆ ಹೊಟೇಲ್‍ಗೆ ದುಡ್ಡು ಭರಿಸುವುದು ಕಷ್ಟವಾಗಿದೆ. ಹೀಗಾಗಿ, ಉಳಿದ ಏಳು ದಿನ ಮನೆಯಲ್ಲೇ ಕ್ವಾರಂಟೈನ್ ಇರುತ್ತೇವೆ. ನಮಗೆ ಮನೆಗೆ ಹೋಗಲು ಸರಕಾರ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News