ತುಮಕೂರು: ಚಿರತೆ ದಾಳಿಯಿಂದ ಮೃತಪಟ್ಟ ಮಗುವಿನ ಪೋಷಕರಿಗೆ ಸರಕಾರ ನೀಡಿದ್ದ ಚೆಕ್ ಬೌನ್ಸ್

Update: 2020-05-29 08:40 GMT

ತುಮಕೂರು, ಮೇ 28: ಜಿಲ್ಲೆಯಲ್ಲಿ ಚಿರತೆ ದಾಳಿಗೆ ಮಗು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಪರಿಹಾರವಾಗಿ ಸರಕಾರದಿಂದ ನೀಡಿದ್ದ ಚೆಕ್ ಬೌನ್ಸ್ ಆಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಫೆಬ್ರವರಿ 29ರಂದು ತಾಲೂಕಿನ ಬೈಚೆನಹಳ್ಳಿಯಲ್ಲಿ ಚಂದನಾ ಎಂಬ ಎರಡೂವರೆ ವರ್ಷದ ಮಗುವನ್ನು ಚಿರತೆ ಎಳೆದೊಯ್ದು ತಿಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಮಗುವಿನ ತಂದೆ ಶ್ರೀನಿವಾಸ್‌ಗೆ ಪರಿಹಾರವಾಗಿ ಏಳೂವರೆ ಲಕ್ಷ ರೂ.ಗಳ ಸರಕಾರದ ಚೆಕ್‌ನ್ನು ಸ್ವತಃ ಶಾಸಕ ಗೌರಿಶಂಕರ್ ಮಾ.4ರಂದು ಹಸ್ತಾಂತರಿಸಿದ್ದರು. ಆದರೆ ಈ ಚೆಕ್ ಇದೀಗ ಬೌನ್ಸ್ ಆಗಿದೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.

ಚೆಕ್‌ನ್ನು ಬ್ಯಾಂಕ್‌ಗೆ ಹಾಕಿದರೆ ಬೌನ್ಸ್ ಆಗಿರುವುದು ತಿಳಿದುಬಂತು. ಈ ಬಗ್ಗೆ ಸಂಬಂಧಪಟ್ಟ ಎಲ್ಲ ಇಲಾಗಳ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೃತ ಮಗುವಿನ ಪೋಷಕರಾದ ಶ್ರೀನಿವಾಸ್ ದೂರಿದ್ದಾರೆ.

ಮಾರ್ಚ್ 4ರಂದು ಪರಿಹಾರದ ಚೆಕ್ ಸರಕಾರದಿಂದ ಲಭಿಸಿತ್ತು. ಮಾ.11ರಂದು ಅದನ್ನು ಬ್ಯಾಂಕಿಗೆ ಹಾಕಿದ್ದು ಮೂರು ದಿನಗಳಲ್ಲಿ ಅಕೌಂಟಿಗೆ ಹಣ ಜಮೆ ಆಗಲಿದೆ ಎಂದು ಬ್ಯಾಂಕ್‌ನ ಸಿಬ್ಬಂದಿ ತಿಳಿಸಿದ್ದರು. ಆದರೆ ಎಪ್ರಿಲ್ 25ರಂದು ಬ್ಯಾಂಕ್‌ನಿಂದ ದೂರವಾಣಿ ಕರೆ ಮಾಡಿ ಚೆಕ್ ಬೌನ್ಸ್ ಆಗಿರುವುದಾಗಿ ಮಾಹಿತಿ ನೀಡಿದರು. ಈ ವಿಷಯವನ್ನು ಜಿಲ್ಲೆಯ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಗುವಿನ ಪೋಷಕ ಶ್ರೀನಿವಾಸ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News