‘‘ಹಣ ನಾವು ಕೊಡುತ್ತೇವೆ, ಮದ್ಯ ಮಾರಾಟ ನಿಲ್ಲಿಸಿ’’

Update: 2020-05-29 13:34 GMT

ಬಳ್ಳಾರಿ, ಮೇ 29: ಸರಕಾರಕ್ಕೆ ನಾವು ಹಣ ನೀಡುತ್ತೇವೆ, ಮದ್ಯ ಮಾರಾಟ ನಿಷೇಧಿಸಿ ಎಂದು ಒತ್ತಾಯಿಸಿ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಅರಗೊಂಡನಹಳ್ಳಿಯಲ್ಲಿ ಮದ್ಯ ವಿರೋಧಿ ಚಳವಳಿ ನಡೆಸಲಾಗಿದೆ.

ನಾವು ಹಣ ನೀಡುತ್ತೇವೆ, ಮದ್ಯ ಮಾರಾಟವನ್ನು ನಿಲ್ಲಿಸಿ ಎಂದು ಸರಕಾರಕ್ಕೆ ಮನಿ ಆರ್ಡರ್ ಮಾಡುವ ಮೂಲಕ ಚಳವಳಿಗಾರರು ಒತ್ತಾಯಿಸಿದ್ದಾರೆ.

 ಲಾಕ್‌ಡೌನ್ ವೇಳೆ ಮದ್ಯ ಮಾರಾಟ ಸ್ಥಗಿತಗೊಳಿಸಿದ್ದರಿಂದ ಹಲವು ಸಂಸಾರಗಳು ನೆಮ್ಮದಿಯ ದಿನಗಳನ್ನು ಕಂಡಿದ್ದವು. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಹೋರಾಟಗಾರ್ತಿ ಎಂ.ಬಿ.ಕೊಟ್ರಮ್ಮ ಒತ್ತಾಯಿಸಿದ್ದಾರೆ.

ಮದ್ಯ ಮಾರಾಟದಿಂದ ಸರಕಾರ ನಡೆಸುತ್ತೇವೆ ಎನ್ನುವುದು ನಾಚಿಕೆ ಗೇಡಿನ ಸಂಗತಿ. ಬಡ ಕೂಲಿ ಕಾರ್ಮಿಕರನ್ನು ಆರ್ಥಿಕವಾಗಿ ಶೋಷಣೆಗೆ ಗುರಿಮಾಡಿ, ಅವರ ರಕ್ತ ಹೀರಿ ಬರುವ ಆದಾಯದಿಂದ ಆಡಳಿತ ನಡೆಸುತ್ತೇವೆ ಎನ್ನುವ ಸರಕಾರಗಳ ಅಮಾನವೀಯ ನಿಲುವು ಖಂಡನೀಯ. ಮದ್ಯ ನಿಷೇಧಿಸುವವರೆಗೂ ಹೋರಾಟ ನಿಲ್ಲದು, ರಾಜ್ಯವ್ಯಾಪಿ ಹೋರಾಟಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದವರು ನುಡಿದರು.

ಚಳವಳಿಯಲ್ಲಿ ಪಕೀರಮ್ಮ, ಝುಬೈದಾಬಿ, ಪಾರ್ವತಮ್ಮ, ಕವಿತಾ, ಜಯಮ್ಮ, ಯಲ್ಲಪ್ಪ, ಕೊಟ್ರೇಶ, ಮಂಜುಳಾ, ವಿಜಯಲಕ್ಷ್ಮೀ, ರೇಣುಕಮ್ಮ, ಸುಜಾತಾ, ನಿರ್ಮಲಾ, ದುರ್ಗಮ್ಮ, ಹುಲಿಗೆಮ್ಮ ಮತ್ತಿತರರು ಭಾಗವಹಿಸಿದ್ದರು.

ಬಳಿಕ ಚಳವಳಿಗಾರರು ಅಂಚೆ ಇಲಾಖೆಯಿಂದ ಮನಿ ಆರ್ಡರ್ ರಸೀದಿಯ ಮೂಲಕ ಸರಕಾರದ ಖಜಾನೆಗೆ ಹಣ ಸಂದಾಯ ಮಾಡುವ ಮೂಲಕ ಮದ್ಯ ನಿಷೇಧಿಸುವಂತೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News